ಬೆಂಗಳೂರು: ಕಳೆದ 2025 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ನೆರವಿನ ಮೊತ್ತವಾದ 5000 ಕೋಟಿ ರೂ.ಗಳನ್ನು ಸರ್ಕಾರ ಪಾವತಿಸದೆ 1.14 ಕೋಟಿ ಗೃಹಲಕ್ಷ್ಮಿಯರ ಪಾಲಿಗೆ ದೊಡ್ಡ ವಂಚನೆಯಾಗಿದೆ. ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಣದ ಹಣೆಬರದ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಬಿಜೆಪಿ ಶಾಸಕ, ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿರುವ ಸುರೇಶ್ ಕುಮಾರ್, ರಾಜ್ಯದ ಜನತೆಯಿಂದ ಸಂಗ್ರಹಿಸಿರುವ ತೆರಿಗೆಯ ಪಾವಿತ್ರ್ಯತೆ ಕುರಿತು ನಿಮಗೆ ಏನೂ ಹೇಳಬೇಕಿಲ್ಲ/ ಪ್ರತಿಯೊಂದು ಪೈಸೆಗೂ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ/ ಇದು ಜನತೆ ಅಪೇಕ್ಷಿಸುವ ಉತ್ತರದಾಯಿತ್ವ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ತಲುಪಬೇಕಿದ್ದ ಎರಡು ತಿಂಗಳ ಹಣದ ಸ್ಥಿತಿಗತಿ ಏನು ಎಂಬುದನ್ನು ರಾಜ್ಯಕ್ಕೆ ತಿಳಿಸಬೇಕಾಗಿರುವುದು ರಾಜ್ಯದ ತಿಜೋರಿಯ ಸಂಪೂರ್ಣ ನಿಯಂತ್ರಣ ಹೊಂದಿದ್ದ ನಿಮ್ಮ ಜವಾಬ್ದಾರಿಯಾಗಿದೆ. ಇದು ಯಾವುದೇ ಸರ್ಕಾರದ ನೈತಿಕ ಪ್ರಶ್ನೆ. ಆ ಜವಾಬ್ದಾರಿಯನ್ನು ತಾವು ಪ್ರಾಮಾಣಿಕವಾಗಿ ನಿರ್ವಹಿಸಿ ರಾಜ್ಯಕ್ಕೆ ಈ ದೊಡ್ಡ ಮೊತ್ತದ ಹಣೆಬರಹದ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

