ಗೆಲೆಫು (ಭೂತಾನ್): ಕ್ರಿಕೆಟ್ ಲೋಕದಲ್ಲಿ ಹಲವು ಅಚ್ಚರಿಯ ದಾಖಲೆಗಳು ನಿರ್ಮಾಣವಾಗುತ್ತವೆ. ಆದರೆ ಭೂತಾನ್‌ನ ಯುವ ಬೌಲರ್ ಸೋನಮ್ ಯೇಶೆ ಈಗ ಬರೆದಿರುವ ದಾಖಲೆ ಮಾತ್ರ ಇಡೀ ಕ್ರೀಡಾ ಜಗತ್ತನ್ನು ಬೆಚ್ಚಿಬೀಳಿಸಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೌಲರ್‌ವೊಬ್ಬರು ಒಂದೇ ಪಂದ್ಯದಲ್ಲಿ ಎಂಟು ವಿಕೆಟ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಮ್ಯಾನ್ಮಾರ್ ವಿರುದ್ಧ ಯೇಶೆ ಅಟ್ಟಹಾಸ ಶುಕ್ರವಾರ ಮ್ಯಾನ್ಮಾರ್ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ 22 ವರ್ಷದ ಸೋನಮ್ ಯೇಶೆ ಈ ಸಾಧನೆ ಮಾಡಿದರು. ಭೂತಾನ್ ನೀಡಿದ್ದ 128 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮ್ಯಾನ್ಮಾರ್ ತಂಡ, ಯೇಶೆ ಅವರ ಸ್ಪಿನ್ ಜಾಲಕ್ಕೆ ಸಿಲುಕಿ ತತ್ತರಿಸಿತು. ತಮ್ಮ ಪಾಲಿನ 4 ಓವರ್‌ಗಳಲ್ಲಿ ಕೇವಲ 7 ರನ್ ನೀಡಿ 8 ವಿಕೆಟ್ ಕಬಳಿಸಿದ ಯೇಶೆ, ಎದುರಾಳಿ ತಂಡವನ್ನು ಕೇವಲ 45 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮ್ಯಾನ್ಮಾರ್‌ನ ಇಬ್ಬರು ಬ್ಯಾಟರ್‌ಗಳು ಮಾತ್ರ ಎರಡಂಕಿ ಮೊತ್ತ ತಲುಪಲು ಸಾಧ್ಯವಾಯಿತು.
ಹಿಂದಿನ ದಾಖಲೆಗಳೆಲ್ಲ ಧೂಳೀಪಟ ಯೇಶೆ ಅವರ ಈ ಸಾಧನೆಗೂ ಮೊದಲು ಪುರುಷರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಕೇವಲ ಇಬ್ಬರು ಬೌಲರ್‌ಗಳು 7 ವಿಕೆಟ್ ಪಡೆದ ದಾಖಲೆ ಹೊಂದಿದ್ದರು:
- ಸಿಯಾಜ್ರುಲ್ ಇದ್ರಸ್ (ಮಲೇಷ್ಯಾ): 2023ರಲ್ಲಿ ಚೀನಾ ವಿರುದ್ಧ 8 ರನ್ ನೀಡಿ 7 ವಿಕೆಟ್.
- ಅಲಿ ದಾವೂದ್ (ಬಹ್ರೇನ್): 2025ರಲ್ಲಿ ಭೂತಾನ್ ವಿರುದ್ಧ 19 ರನ್ ನೀಡಿ 7 ವಿಕೆಟ್.
ಸ್ಥಳೀಯ ಲೀಗ್ ಪಂದ್ಯಗಳಲ್ಲಿ ಕಾಲಿನ್ ಅಕರ್ಮನ್ ಮತ್ತು ತಸ್ಕಿನ್ ಅಹ್ಮದ್ ಕೂಡ 7 ವಿಕೆಟ್ ಪಡೆದಿದ್ದಾರೆ. ಆದರೆ 8 ವಿಕೆಟ್ ಪಡೆದ ವಿಶ್ವದ ಮೊದಲ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಈಗ ಯೇಶೆ ಪಾತ್ರರಾಗಿದ್ದಾರೆ.
ಮಹಿಳಾ ಕ್ರಿಕೆಟ್‌ನ ದಾಖಲೆ ಏನು? ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಇಂಡೋನೇಷ್ಯಾದ ರೋಹ್ಮಾಲಿಯಾ ಅವರು 2024ರಲ್ಲಿ ಮಂಗೋಲಿಯಾ ವಿರುದ್ಧ ಯಾವುದೇ ರನ್ ನೀಡದೆ 7 ವಿಕೆಟ್ (7/0) ಪಡೆದಿದ್ದು ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
ಭೂತಾನ್ ಮತ್ತು ಮ್ಯಾನ್ಮಾರ್ ನಡುವಿನ ಐದು ಪಂದ್ಯಗಳ ಈ ಸರಣಿಯಲ್ಲಿ ಸೋನಮ್ ಯೇಶೆ ಈಗಾಗಲೇ ಮೊದಲ ನಾಲ್ಕು ಪಂದ್ಯಗಳಲ್ಲಿ ಒಟ್ಟು 12 ವಿಕೆಟ್ ಪಡೆಯುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.

