ಬೆಂಗಳೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕುರಿತ ಅಂಶವನ್ನು ಸಿದ್ದರಾಮಯ್ಯ ಅವರ ಬಜೆಟ್ ಪುಸ್ತಕದಿಂದಲೇ ಮಾಯವಾಗಿದೆ ಎಂದು ಬಿ.ಆರ್.ಪಾಟೀಲ್ ತಮ್ಮದೇ ಸರ್ಕಾಅರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಬಿ.ಆರ್.ಪಾಟೀಲ್., ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಹಿಂದೆ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೆ. ಕಳೆದ ಬಜೆಟ್ನಲ್ಲಿ ಪ್ರಕಟ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದರು. ಬಜೆಟ್ ಪ್ರೂಫ್ ರೀಡಿಂಗ್ನಲ್ಲೂ ಕಾಯ್ದೆಗೆ ಬದಲಾವಣೆ ತರುತ್ತೇವೆ ಎಂದು ಇತ್ತು. ಕೊನೇ ಘಳಿಗೆಯಲ್ಲಿ ಬಜೆಟ್ ಕಾಪಿಯಲ್ಲೇ ಆ ವಿಚಾರ ಹೈಡ್ ಮಾಡಲಾಯ್ತು. ಯಾವ ಮಾಯಾಜಾಲದಿಂದ ಬಜೆಟ್ ಅಂಶವನ್ನೇ ಮಾಯ ಮಾಡಿದ್ರು ಎಂಬುದು ಗೊತ್ತಿಲ್ಲ ಎಂದು ಕಿಡಿಕಾರಿದರು.
ಇಂದು ರಣದೀಪ್ ಸಿಂಗ್ ಸುರ್ಜೇವಾಲ ಕರೆದು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯಿರಿ ಅಂದ್ರು. ನಾನು ಈ ವಿಚಾರ ಪ್ರಸ್ತಾಪಿಸಿ ಯಾಕೆ ಭರವಸೆ ಕೊಟ್ರಿ ಅಂದೆ. ಮೊದಲು ಪ್ರಣಾಳಿಕೆಯಲ್ಲಿ ಭರವಸೆ ಈಡೇರಿಸಿ ಅಂತ ಹೇಳಿದ್ದೇನೆ. ಈ ಸಂಬಂಧ ನಾನು ರಾಹುಲ್ ಗಾಂಧಿಗೂ ಪತ್ರ ಬರೆಯುತ್ತೇನೆ. ನಮಗೂ ಬಿಜೆಪಿಗೂ ವ್ಯತ್ಯಾಸ ಏನು? ಬಿಜೆಪಿಯವರು ರಿಯಲ್ ಎಸ್ಟೇಟ್ಗಾಗಿ ಮಾಡಿದ್ರು. ನಮ್ಮ ಸರ್ಕಾರಕ್ಕೂ ಬಿಜೆಪಿಗೂ ಏನು ವ್ಯತ್ಯಾಸವಿದೆ? ಎಂದು ಪ್ರಶ್ನಿಸಿದರು.
ಕಳೆದ ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ಅರ್ಥವಿಲ್ಲದಂತೆ ಮಾಡಿತು. ದೇವರಾಜು ಅರಸು ಈ ಕಾಯ್ದೆ ತಂದು ಕ್ರಾಂತಿ ಮೂಡಿಸಿದ್ದರು. ಭೂಸುಧಾರಣಾ ಕಾಯ್ದೆಯನ್ನು ಮೂಲ ಸ್ವರೂಪದಲ್ಲೇ ಜಾರಿಗೆ ತರುತ್ತೇವೆ ಅಂತ ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಿದ್ದೇವೆ. ಸರ್ಕಾರ ಬಂದು ಮೂರೂವರೆ ವರ್ಷ ಕಳೆದರೂ ಕಾಯ್ದೆಗೆ ತಿದ್ದುಪಡಿ ತಂದಿಲ್ಲ. ನಾನು ಸದನದಲ್ಲಿ ಪ್ರಶ್ನೆ ಕೇಳಿದರೂ ತಿದ್ದುಪಡಿ ಪ್ರಸ್ತಾವನೆ ಮುಂದಿಲ್ಲ ಅಂತ ಉತ್ತರ ಕೊಟ್ಟಿದ್ದಾರೆ. ಹಾಗಾದ್ರೆ ಯಾಕೆ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ರಿ? ಈಗ ಹೀಗೆ ಮಾಡಿದರೆ ಬಿಜೆಪಿಯವರು ಮಾಡಿದ ತಿದ್ದುಪಡಿಗೆ ಬೆಂಬಲ ಕೊಟ್ಟಂತೆ ಅಲ್ವೇ ಎಂದು ಕೇಳಿದರು.
2020ರಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆ ಮೂಲಕ ರಾಜ್ಯದಲ್ಲಿ ಕೃಷಿ ಭೂಮಿ ಖರೀದಿ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿತ್ತು. ಮೂಲ ಕಾಯ್ದೆಯಲ್ಲಿದ್ದ 79A ಸೆಕ್ಷನ್ ರದ್ದು ಪಡಿಸಲಾಗಿತ್ತು. ಈ ಮುಂಚೆ ಕೃಷಿಯೇತರ ಮೂಲಗಳಿಂದ ವಾರ್ಷಿಕ 25 ಲಕ್ಷ ರೂ. ಕಡಿಮೆ ಆದಾಯ ಇದ್ದವರು ಮಾತ್ರ ಕೃಷಿ ಭೂಮಿಯನ್ನು ಖರೀದಿ ಮಾಡಬಹುದಿತ್ತು. ಆ ಮಿತಿಯನ್ನು ತಿದ್ದುಪಡಿ ಕಾಯ್ದೆಯಲ್ಲಿ ತೆಗೆದುಹಾಕಲಾಗಿತ್ತು. ಕೃಷಿಕರಲ್ಲದವರು, ಉದ್ಯಮಿಗಳು, ಕೃಷಿ ಹಿನ್ನೆಲೆ ಇಲ್ಲದ ಯಾವುದೇ ವ್ಯಕ್ತಿ ಕೃಷಿ ಭೂಮಿಯನ್ನು ಖರೀದಿ ಮಾಡಲು ಅನುವು ಮಾಡಲಾಗಿದೆ.
ಈ ತಿದ್ದುಪಡಿ ಕಾಯ್ದೆಗೆ ರಾಜ್ಯದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದು ರೈತ ವಿರೋಧಿ ಕಾಯ್ದೆ ಎಂದು ಆರೋಪಿಸಿತ್ತು. ಆ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಿ ಹಿಂದಿನ ಮೂಲ ಕಾಯ್ದೆಯನ್ನೇ ಮರುಸ್ಥಾಪಿಸಬೇಕು ಎಂದು ರೈತರು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಗ್ರಹಿಸಿದ್ದರು. ಇತ್ತ ಪ್ರಣಾಳಿಕೆಯಲ್ಲೂ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭೂ ಸುಧಾರಣ ತಿದ್ದುಪಡಿ ಕಾಯ್ದೆಯನ್ನು ರದ್ದು ಪಡಿಸುವುದಾಗಿ ಭರವಸೆ ನೀಡಿತ್ತು. ಆದರೆ, ಈ ವರೆಗೂ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂಬುದು ಬಿ.ಆರ್.ಪಾಟೀಲ್ ವಾದ.

