HomeIndiaಪ್ರೇಯಸಿ ಮೇಲೆ ಸೇಡು ತೀರಿಸಿಕೊಳ್ಳಲು ಯುವಕನ ಹುಚ್ಚಾಟ ; ಬಾಡಿಗೆ ಜೀಪಿನಲ್ಲಿ ಬಂದು ಸಾಲು ಸಾಲು...

ಪ್ರೇಯಸಿ ಮೇಲೆ ಸೇಡು ತೀರಿಸಿಕೊಳ್ಳಲು ಯುವಕನ ಹುಚ್ಚಾಟ ; ಬಾಡಿಗೆ ಜೀಪಿನಲ್ಲಿ ಬಂದು ಸಾಲು ಸಾಲು ವಾಹನಗಳಿಗೆ ಡಿಕ್ಕಿ | Watch

ಗೆಳತಿಯೊಂದಿಗೆ ನಡೆದ ಮಾತಿನ ಚಕಮಕಿಯಿಂದ ಕೆರಳಿದ ಯುವಕನೊಬ್ಬ, ಬಾಡಿಗೆಗೆ ಪಡೆದಿದ್ದ ಜೀಪನ್ನೇ ಆಕ್ರೋಶ ತೀರಿಸಿಕೊಳ್ಳುವ ಅಸ್ತ್ರವನ್ನಾಗಿ ಮಾಡಿಕೊಂಡು ವಸತಿ ಬಡಾವಣೆಯೊಂದರಲ್ಲಿ ಭೀತಿ ಹುಟ್ಟಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದೆ. ಮಂಗಳವಾರ ತಡರಾತ್ರಿ ಸುಮಾರು ಹತ್ತೂವರೆ ಗಂಟೆಯ ಸುಮಾರಿಗೆ ಮಿಸ್ರೋದ್ ಪೊಲೀಸ್ ಠಾಣಾ ವ್ಯಾಪ್ತಿಯ ಫಾರ್ಚೂನ್ ಹೆರಿಟೇಜ್ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದ್ದು, ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ಆರಕ್ಕೂ ಹೆಚ್ಚು ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ.

ಸ್ಥಳೀಯ ಮೂಲಗಳ ಪ್ರಕಾರ, ಆರೋಪಿ ಯುವಕ ಮೊದಲು ತನ್ನ ಗೆಳತಿಯೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಜಗಳವಾಡಿದ್ದ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಸಾರ್ವಜನಿಕರು ಆತನ ವರ್ತನೆಯನ್ನು ತಡೆದು ಬುದ್ಧಿವಾದ ಹೇಳಿದ್ದರು. ಇದರಿಂದ ತೀವ್ರವಾಗಿ ಕೆರಳಿದ ಆತ, ಅಲ್ಲಿಂದ ಹೊರಟು ಬಾಡಿಗೆ ಆಧಾರದಲ್ಲಿ ಥಾರ್ ಜೀಪೊಂದನ್ನು ಪಡೆದುಕೊಂಡು ಮತ್ತೆ ಅದೇ ಬಡಾವಣೆಗೆ ವಾಪಸ್ ಬಂದಿದ್ದಾನೆ. ಆತನ ರಭಸವನ್ನು ಕಂಡು ಬಡಾವಣೆಯ ಮುಖ್ಯ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ಗೇಟ್ ಮುಚ್ಚಲು ಪ್ರಯತ್ನಿಸಿದರಾದರೂ, ಆತ ಕಿಂಚಿತ್ತೂ ಕ್ಯಾರೆ ಎನ್ನದೆ ನೇರವಾಗಿ ಗೇಟಿಗೆ ವಾಹನವನ್ನು ಗುದ್ದಿಸಿ ಒಳನುಗ್ಗಿದ್ದಾನೆ.

ಬಡಾವಣೆಯ ಒಳಗೆ ಅತಿ ವೇಗವಾಗಿ ವಾಹನ ಚಲಾಯಿಸಿದ ಆತ, ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಒಂದಾದ ಮೇಲೊಂದರಂತೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾನೆ. ನಿಯಂತ್ರಣ ಕಳೆದುಕೊಂಡು ಮುನ್ನುಗ್ಗುತ್ತಿದ್ದ ವಾಹನವನ್ನು ಕಂಡು ರಸ್ತೆಯಲ್ಲಿದ್ದ ಜನ ಹಾಗೂ ಸ್ಥಳೀಯ ನಿವಾಸಿಗಳು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ. ಒಂದು ವೇಳೆ ಜನರು ಸಮಯಪ್ರಜ್ಞೆ ಮೆರೆದು ಪಕ್ಕಕ್ಕೆ ಸರಿಯದಿದ್ದರೆ ದೊಡ್ಡ ಮಟ್ಟದ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು ಎಂದು ಪ್ರತ್ಯಕ್ಷದರ್ಶಿಗಳು ಭಯಾನಕ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಇಡೀ ಕೃತ್ಯವು ಸ್ಥಳೀಯ ಕಣ್ಗಾವಲು ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯಾವಳಿಗಳು ಹರಿದಾಡುತ್ತಿವೆ. ವಾಹನ ಅಡ್ಡಾದಿಡ್ಡಿಯಾಗಿ ಚಲಿಸಿ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಬಡಾವಣೆಯ ನಿವಾಸಿ ಕಮಲ್ ಸಿಂಗ್ ಸೋಲಂಕಿ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಿಸ್ರೋದ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ರತನ್ ಸಿಂಗ್ ಪರಿಹಾರ್, ಘಟನೆ ಸಂಬಂಧ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಆರೋಪಿಗೆ ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಲಾಗುವುದು ಎಂದು ಹೇಳಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೆ ಆತ ಈ ವಾಹನವನ್ನು ಎಲ್ಲಿಂದ ಬಾಡಿಗೆಗೆ ಪಡೆದಿದ್ದ ಎಂಬ ಮಾಹಿತಿಯನ್ನೂ ಕಲೆಹಾಕುತ್ತಿದ್ದಾರೆ. ಆದರೆ ಘಟನೆಯ ತೀವ್ರತೆಯನ್ನು ಪರಿಗಣಿಸದೆ ಪೊಲೀಸರು ಆರೋಪಿಯ ವಿರುದ್ಧ ಸಾಮಾನ್ಯ ಕಲಮುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಘಟನೆ ನಡೆದು ಹಲವು ಗಂಟೆಗಳು ಕಳೆದರೂ ಆತನನ್ನು ಬಂಧಿಸಿಲ್ಲ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular