ಬೆಂಗಳೂರು: ಸಾರಿಗೆ ಸಚಿವ ಬೈರತಿ ಸುರೇಶ್ ಇಂದು ಬಿಎಂಟಿಸಿ ಬಸ್ ನಲ್ಲಿ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಮಾಸ್ಕ್ ಧರಿಸಿ ಸಾಮಾನ್ಯ ಪ್ರಯಾಣಿಕನಂತೆ ಬಿಎಂಟಿಸಿ ಬಸ್ ಏರಿದ ಸಚಿವ ಬೈರತಿ ಸುರೇಶ್ ಟಿಕೆಟ್ ಪಡೆಯುವಾಗ ಕಂಡಕ್ಟರ್ ತೋರಿದ ವರ್ತನೆ ಕಂಡು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಸ್ಕ್ ಧರಿಸಿದ್ದ ಸಚಿವ ಬೈರತಿ ಸುರೇಶ್ ಸಾಮಾನ್ಯ ಪ್ರಯಾಣಿಕನಂತೆ ಬಸ್ ನಲ್ಲಿ ಸೀಟ್ ನಲ್ಲಿ ಕುಳಿತಿದ್ದಾರೆ. ಕಂಡಕ್ಟರ್ ಬರುತ್ತಿದ್ದಂತೆ ಭೂಪಸಂದ್ರದಿಂದ ಹೆಬ್ಬಾಳಕ್ಕೆ ಪ್ರಯಾಣಿಸಲು 100 ರೂಪಾಯಿ ಕೊಟ್ಟು ಎರಡು ಟಿಕೆಟ್ ಪಡೆದಿದ್ದಾರೆ. ಈ ವೇಳೆ ಕಂಡಕ್ಟರ್ ಚಿಲ್ಲರೆ ಕೊಡಬೇಕು ಎಂದಿದ್ದಾರೆ. ಅದಕ್ಕೆ ಪ್ರಯಾಣಿಕನ ಸೋಗಿನಲ್ಲಿದ್ದ ಸಚಿವರು ತನ್ನ ಬಳಿ ಚಿಲ್ಲರೆ ಇಲ್ಲ ಎಂದಿದ್ದಾರೆ. ಗರಂ ಆದ ಕಂಡಕ್ಟರ್ ಚಿಲ್ಲರೆ ಇಲ್ಲ ಎಂದರೆ ಕೆಳಗೆ ಇಳಿ ಎಂದಿದ್ದಾರೆ.
ಕಂಡಕ್ಟರ್ ಆಗಿ ಚಿಲ್ಲರೆ ಇಲ್ಲ ಎಂದರೆ ಹೇಗೆ ಎಂದು ಸಚಿವರು ಪ್ರಶ್ನಿಸಿದ್ದಾರೆ. 6 ರೂಪಾಯಿ ಟಿಕೆಟ್ಗೆ 100 ರೂಪಾಯಿ ಕೊಟ್ಟರೆ ಹೇಗೆ? ಎಂದು ಕಂಡಕ್ಟರ್ ಗದರಿದ್ದಾರೆ. ಮುಂದಿನ ಸ್ಟಾಪ್ ನಲ್ಲಿ ಬಸ್ ನಿಲ್ಲಿಸುವಂತೆ ಸಚಿವರು ಹೇಳಿದ್ದಾರೆ. ಚಿಲ್ಲರೆ ಇಲ್ಲ, ಮುಂದಿನ ಸ್ಟಾಪ್ ನಲ್ಲಿ ನಿಲ್ಲಿಸಲಾಗಲ್ಲ ಎಂದಿದ್ದಾರೆ. ಈ ವೇಳೆ ಸಚಿವ ಬೈರತಿ ಸುರೇಶ್ ಮಾಸ್ಕ್ ತೆಗೆದು ಕಂಡಕ್ಟರ್ ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಗದಿತ ಸ್ಥಳದಲ್ಲಿ ಬಸ್ ನಿಲ್ಲಿಸದ ಕಾರಣಕ್ಕೆ, ಚಿಲ್ಲರೆ ಇಲ್ಲ ಎಂದು ದರ್ಪ ಮೆರೆಯುತ್ತಿದ್ದ ಕಂಡಕ್ಟರ್ ನನ್ನು ತಕ್ಷಣ ಅಮಾನತು ಮಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

