ಮಹಿಳೆಯರ ಬದುಕಿನಲ್ಲಿ ಮುಟ್ಟು ನಿಲ್ಲುವ ಮುನ್ನ ಎದುರಾಗುವ ಪೆರಿಮೆನೋಪಾಸ್ ಹಂತವು ದೈಹಿಕ ಹಾಗೂ ಮಾನಸಿಕವಾಗಿ ಅತ್ಯಂತ ಸವಾಲಿನದ್ದಾಗಿರುತ್ತದೆ. ‘ಮೈನೆ ಪ್ಯಾರ್ ಕಿಯಾ’ ಖ್ಯಾತಿಯ 57 ವರ್ಷದ ನಟಿ ಭಾಗ್ಯಶ್ರೀ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಪೆರಿಮೆನೋಪಾಸ್ ಅವಧಿಯಲ್ಲಿ ಎದುರಿಸಿದ ತೀವ್ರ ಮಾನಸಿಕ ಏರಿಳಿತಗಳು ಹಾಗೂ ದೈಹಿಕ ಯಾತನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಈ ಹಂತದಲ್ಲಿ ತಮಗೆ ವಿಪರೀತ ಮೂಡ್ ಸ್ವಿಂಗ್ಸ್, ರಾತ್ರಿ ವೇಳೆ ಶರೀರ ಪೂರ್ತಿ ಬೆವರುವಿಕೆ ಹಾಗೂ ನೆನಪಿನ ಶಕ್ತಿ ಮಸುಕಾಗುವಂತಹ ಸಮಸ್ಯೆಗಳು ಕಾಡುತ್ತಿದ್ದವು ಎಂದು ಅವರು ಹೇಳಿದ್ದಾರೆ. ಭಾವನೆಗಳನ್ನು ತಡೆದುಕೊಳ್ಳಲು ಸಾಧ್ಯವಾಗದಿದ್ದಾಗ ದಿನದಲ್ಲಿ ನಾಲ್ಕೈದು ಬಾರಿ ಶವರ್ ಕೆಳಗೆ ನಿಂತು ಮನಸ್ಸಿನಾಳದ ನೋವನ್ನು ಕಣ್ಣೀರಿನ ಮೂಲಕ ಹೊರಹಾಕುತ್ತಿದ್ದೆ. ನೀರಿನ ಶಕ್ತಿಯು ನಕಾರಾತ್ಮಕ ಶಕ್ತಿಯನ್ನು ತೊಳೆದು ಹಾಕುತ್ತದೆ ಎಂಬ ನಂಬಿಕೆ ನನಗಿತ್ತು ಎಂದು ಭಾಗ್ಯಶ್ರೀ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ಸವಾಲಿನ ಸಮಯದಲ್ಲಿ ಸೂಕ್ತ ವೈದ್ಯಕೀಯ ಸಲಹೆ ಪಡೆಯುವುದರ ಜೊತೆಗೆ ಸರಿಯಾದ ಆಹಾರ ಪದ್ಧತಿ, ವ್ಯಾಯಾಮ, ಸಕ್ಕರೆ ಪ್ರಮಾಣ ಕಡಿಮೆ ಮಾಡುವುದು ಹಾಗೂ ಪ್ರಾಣಾಯಾಮದ ಮೂಲಕ ತಮ್ಮ ಆರೋಗ್ಯವನ್ನು ಸರಿದಾರಿಗೆ ತಂದಿರುವುದಾಗಿ ಅವರು ತಿಳಿಸಿದ್ದಾರೆ. ರಾತ್ರಿ ವೇಳೆ ಬೆವರಿನಿಂದ ಬಟ್ಟೆ ಒದ್ದೆಯಾದಾಗ ನಿದ್ರೆ ಹಾಳಾಗದಂತೆ ತಡೆಯಲು ಬೆಡ್ ಶೀಟ್ ಹಾಗೂ ರಾತ್ರಿ ಉಡುಪುಗಳನ್ನು ಪಕ್ಕದಲ್ಲೇ ಇಟ್ಟುಕೊಳ್ಳುವಂತಹ ಕೆಲವು ಉಪಯುಕ್ತ ಸುಲಭ ಸಲಹೆಗಳನ್ನು ಅವರು ಇತರ ಮಹಿಳೆಯರಿಗಾಗಿ ನೀಡಿದ್ದಾರೆ.

