ಶಿವಮೊಗ್ಗ: ಚಿತ್ರದುರ್ಗ ಶಾಖಾ ಕಾಲುವೆಗೆ ಭದ್ರಾ ಜಲಾಶಯದಿಂದ ಪ್ರಾಯೋಗಿಕವಾಗಿ 3 ಟಿಎಂಸಿ ಯೋಜನೆಗೆ ಚಾಲನೆ ನೀಡಿರುವುದು ಅತ್ಯಂತ ಸಂತಸದ ವಿಷಯವಾಗಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತಿಳಿಸಿದರು.
ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಯೋಜನೆಗೆ ಭದ್ರಾ ಮೇಲ್ದಂಡೆ ಯೋಜನೆ ಇನ್ ಟೇಕ್ ಪಾಯಿಂಟ್ ನಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
6-7 ದಶಕಗಳ ಹೋರಾಟದ ಫಲ ಇಂದು ಸಾಕಾರ ಆಗಿದೆ. ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರು, ಸಂಘಗಳು, ಸಂಘಟನೆಗಳಿಗೆ, ಸಹಕರಿಸಿದ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳಿಗೆ, ಉಸ್ತುವಾರಿ ಸಚಿವರುಗಳಿಗೆ, ರೈತರುಗಳಿಗೆ ಹೃದಯಪೂರ್ವಕ ವಂದನೆ ಸಲ್ಲುಸುತ್ತೇನೆ. ಈ ಯೋಜನೆಯಿಂದ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಹಾಗೂ ದಾವಣಗೆರೆ ಈ 4 ಜಿಲ್ಲೆಯ 12 ತಾಲ್ಲೂಕುಗಳಿಗೆ ನೀರು ಲಭಿಸಲಿದೆ ಎಂದರು.
ತುಂಗಾದಿಂದ 17.4 ಭದ್ರಾಗೆ ಲಿಫ್ಟ್ ಮಾಡಿ, ಭದ್ರಾದಿಂದ 12.5 ಟಿಎಂಸಿ ಒಟ್ಟು 29.9 ಟಿಎಂಸಿ ನೀರನ್ನು ಲಿಫ್ಟ್ ಮಾಡಲಾಗುವುದು.
ಪ್ರಾಯೋಗಿಕವಾಗಿ 3 ಟಿಎಂಸಿ ನೀರು ಬಿಡುಗಡೆ:
ನೀರಾವರಿ ಯೋಜನೆಯಡಿ ಪ್ರಾಯೋಗಿಕವಾಗಿ 3 ಟಿಎಂಸಿ ನೀರನ್ನು ಮಾತ್ರ ಬಿಡುಗಡೆ ಮಾಡಲು ನೀರಾವರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.
ಈ ಯೋಜನೆಯು ಒಟ್ಟು 367 ಕೆರೆಗಳಿಗೆ ನೀರು ತುಂಬಿಸುವ ಹಾಗೂ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಒದಗಿಸುವ ಉದ್ದೇಶವನ್ನು ಹೊಂದಿದೆ. ಆದರೆ, ಪ್ರಸ್ತುತ ಹನಿ ನೀರಾವರಿ ಯೋಜನೆಯ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಮತ್ತು ಕೆರೆಗಳಿಗೆ ನೀರು ತುಂಬಿಸುವ ಕೆಲಸವೂ ಭಾಗಶಃ ಮಾತ್ರವಾಗಿದೆ. ಆದ್ದರಿಂದ, ಪ್ರಾಯೋಗಿಕ ಪ್ರಸ್ತುತ 3 ಟಿಎಂಸಿಗೆ ಮಾತ್ರ ಸೀಮಿತವಾಗಿ ನೀರು ಹರಿಸಲಾಗುತ್ತಿದೆ. ಮುಂದೆ ಇದು ಶಾಶ್ವತ ಯೋಜನೆಯಾಗಲಿದೆ.
ಇನ್ನೂ ಬೆಳೆಗಳಿಗೆ ಸಂಪೂರ್ಣ ನೀರಾವರಿ ಸೌಲಭ್ಯ ಕಲ್ಪಿಸಿಲ್ಲ ಹಾಗೂ ನೀರು ಎತ್ತುವ (ಲಿಫ್ಟ್) ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಮುಂದಿನ ಹಂತದ ಯೋಜನೆಗಳು ಜಾರಿಯಾಗಲಿವೆ. ಅಲ್ಲಿಯವರೆಗೆ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಸಹಕರಿಸಬೇಕು ಹಾಗೂ ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ಕೋರಿದರು.
ಈ ವೇಳೆ ಚಿತ್ರದುರ್ಗ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಣ್ಣ, ಶಿರಾ ಶಾಸಕ ಟಿ.ಬಿ.ಜಯಚಂದ್ರ, ತರೀಕೆರೆ ಶಾಸಕ ಶ್ರೀನಿವಾಸ್, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಜನ ಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.
ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ಸಂಭ್ರಮ:
ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ಸಂಭ್ರಮ ಮನೆ ಮಾಡಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸಲು ಚಾಲನೆ ನೀಡಲಾಗಿದೆ. ಕಾಲುವೆಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಬಿಡುಗಡೆ ಮಾಡಲಾಗಿದೆ. ಪ್ರಾಯೋಗಿಕವಾಗಿ ಇಂದು ಕಾಲುವೆಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಭದ್ರಾ ಡ್ಯಾಂ ನಿಂದ ಕಾಲುವೆಯ ಮೂಲಕ 142 ಕಿಲೋಮೀಟರ್ ನೀರು ಹರಿಯಲಿದೆ. ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗದ ಕಾಲುವೆಗೆ ನೀರು ಹರಿಯಲಿದೆ. ನಂತರ ನೈಸರ್ಗಿಕ ಹಳ್ಳದಿಂದ ರಾಣಿಕೆರೆವರೆಗೆ ನೀರು ಪೂರೈಕೆ ಮಾಡಲಾಗುವುದು. ಚಳ್ಳಕೆರೆ ತಾಲೂಕಿನ ರಾಣಿಕೆರೆಗೆ ನೀರು ಹರಿದು ಬರಲಿದೆ. ಕಾಲುವೆಯ ಹಳ್ಳ, ಕೆರೆ ಕೋಡಿ ಪಾತ್ರದಲ್ಲಿ ಜನರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ವಿಶ್ವೇಶ್ವರಯ್ಯ ಜಲ ನಿಗಮದ ಅಧೀಕ್ಷಕ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.

