ಬೆಂಗಳೂರು: ಕುಡಿದ ಮತ್ತಲ್ಲಿ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರು ಹೊರವಲಯ ಸರ್ಜಾಪುರ ಸಮೀಪದ ಮಟ್ಟನಹಳ್ಳಿ ಕೆರೆ ಬಳಿ ನಡೆದಿದೆ.
ಮೋಹನ್(25) ಕೊಲೆಯಾದ ಯುವಕ. ತಮಿಳುನಾಡಿನ ಸಿಂಗಸದನಪಲ್ಲಿ ಗ್ರಾಮದವನಾದ ಮೋಹನ್ ಸ್ನೇಹಿತನ ಜೊತೆ ಎಣ್ಣೆ ಪಾರ್ಟಿ ಮಾಡಲು ಹೋಗಿದ್ದ. ಸ್ನೇಹಿತ ಮನೋಜ್ ಮತ್ತು ಮೋಹನ್ ಕಂಠಪೂರ್ತಿ ಕುಡಿದಿದ್ದರು. ಕುಡಿದ ನಶೆಯಲ್ಲಿ ಮೋಹನ್ ಮತ್ತು ಮನೋಜ್ ನಡುವೆ ಗಲಾಟೆ ಶುರುವಾಗಿದೆ.
ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಮನೋಜ್ ಅಲ್ಲೇ ಇದ್ದ ಕಲ್ಲನ್ನ ಮೋಹನ್ ತಲೆ ಮೇಲೆ ಎತ್ತಿಹಾಕಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಮೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಮನೋಜ್‌ನನ್ನು ಸರ್ಜಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

