ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 31 ಲಕ್ಷ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬನ್ನೇರುಘಟ್ಟದ ಸಕಲವಾರ ರಸ್ತೆಯಲ್ಲಿ ಕಳೆದ ಫೆಬ್ರವರಿ 1ರಂದು ದರೋಡೆ ನಡೆದಿತ್ತು. ಸಿಸಿಟಿವಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ.
ಉಡಾನ್ ಕಂಪನಿಯ ಬ್ರಾಂಚ್ಗಳಲ್ಲಿ ಹಣ ಕಲೆಕ್ಷನ್ ಮಾಡಿಕೊಂಡು ಹೋಗುತ್ತಿದ್ದ ಪ್ರೈವೇಟ್ ಏಜೆನ್ಸಿಯ ಸಿಬ್ಬಂದಿ ಶ್ರೀಕೈಲಾಸ್ ಎಂಬವರನ್ನು 2 ಬೈಕ್ಗಳಲ್ಲಿ ಹಿಂಬಾಲಿಸಿದ್ದ ನಾಲ್ವರು ದುಷ್ಕರ್ಮಿಗಳ ತಂಡ, ಬೈಕ್ ಅಡ್ಡಗಟ್ಟಿ 31,38,625 ರೂ. ಹಣವನ್ನು ದರೋಡೆ ಮಾಡಿ ಎಸ್ಕೇಪ್ ಆಗಿತ್ತು.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್, ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಆರೋಪಿಗಳ ಬಂಧನಕ್ಕೆ 3 ತಂಡಗಳನ್ನ ರಚನೆ ಮಾಡಿದ್ದರು. ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ನಿಖಿಲ್, ಪ್ರಶಾಂತ್ ಅಲಿಯಾಸ್ ಪಿಂಕಿ, ಅರುಣ್ ಕುಮಾರ್, ಹರೀಶ್ ಮತ್ತು ರಕ್ಷಿತ್ ಸೇರಿ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಹಲವರ ವಿಚಾರಣೆ ಮಾಡಿದಾಗ ಉಡಾನ್ ಕಂಪನಿ ಸಿಬ್ಬಂದಿ ರಕ್ಷಿತ್ ಎಂಬಾತನನ್ನು ಬಂಧಿಸಲಾಗಿತ್ತು. ದರೋಡೆ ಮಾಸ್ಟರ್ ಮೈಂಡ್ ಈತನೇ ಅನ್ನೋದು ತಿಳಿಯುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

