ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿಯೇ ಬೆಳ್ಳಂಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ನಡುರಸ್ತೆಯಲ್ಲಿಯೇ ಹೊತ್ತಿ ಉರಿದ ಘಟನೆ ಬೆಂಗಳೂರಿನ ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಚಲಿಸುತ್ತಿದ್ದ ಕಾರಿನಲ್ಲಿ ಮಧ್ಯರಸ್ತೆಯಲ್ಲಿಯೇ ಬೆಂಕಿ ಹೊತ್ತಿಕೊಂಡಿದೆ. ಕಾರು ಯಶವಂತಪುರದಿಂದ ಮಲ್ಲೇಶ್ವರಂಗೆ ತೆರಳುತ್ತಿತ್ತು. ಕಾರಿನ ಒಳಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರು ಚಾಲಕ ಕಾರಿನಿಂದ ಇಳಿದಿದ್ದಾರೆ. ನೋಡನೋಡುತ್ತಿದ್ದಂತೆ ಕಾರಿನ ತುಂಬಾ ಬೆಂಕಿ ಆವರಿಸಿದ್ದು, ಕಾರು ಧಗಧಗನೆ ಹೊತ್ತಿ ಉರಿದಿದೆ.
ಅದೃಷ್ಟವಶಾತ್ ಕ್ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳೀಯರು ತಕ್ಷಣ ಕಾರಿನ ಬೆಂಕಿ ನಂದಿಸಿದ್ದಾರೆ. ಆದರೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

