HomeKarnatakaಬೆಂಗಳೂರು ಟ್ರೀ ಪಾರ್ಕ್ ಎಲ್ಲಿ ನಿರ್ಮಾಣ?, ಯೋಜನೆ ವಿಶೇಷತೆಗಳು

ಬೆಂಗಳೂರು ಟ್ರೀ ಪಾರ್ಕ್ ಎಲ್ಲಿ ನಿರ್ಮಾಣ?, ಯೋಜನೆ ವಿಶೇಷತೆಗಳು

ಬೆಂಗಳೂರು ನಗರದಲ್ಲಿ ಪಾರ್ಕ್‌ಗಳು ಆಯಿತು, ಚಿಟ್ಟೆ ಪಾರ್ಕ್ ಆಯಿತು. ಈಗ ಟ್ರೀ ಪಾರ್ಕ್‌ ಯೋಜನೆಯನ್ನು ಸರ್ಕಾರ ಕೈಗೊಳ್ಳಲಿದೆ. ನಗರದಲ್ಲಿ ಒಟ್ಟು 7 ಟ್ರೀ ಪಾರ್ಕ್ ನಿರ್ಮಾಣವಾಗಲಿದ್ದು, ಮೊದಲ ಟ್ರೀ ಪಾರ್ಕ್ ಸ್ಥಳವನ್ನು ಸಚಿವ ಎಂ.ಬಿ.ಪಾಟೀಲ್ ಶನಿವಾರ ಪರಿಶೀಲನೆ ನಡೆಸಿದರು.

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಸಮೀಪದಲ್ಲಿರುವ NGEFಗೆ ಸೇರಿದ ಬೃಹತ್ ಜಾಗದಲ್ಲಿ ಅತ್ಯಾಕರ್ಷಕ ಟ್ರೀ ಪಾರ್ಕ್ ಹಾಗೂ ವಿವಿಧ ನಾಗರಿಕ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ ನಿರ್ಮಿಸುವ ಸಂಬಂಧ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಚಿವರು ಸ್ಥಳ ಪರಿಶೀಲನೆ ಮಾಡಿದರು.

ಎನ್‌ಜಿಇಫ್‌ಗೆ ಸೇರಿದ ಸುಮಾರು 105 ಎಕರೆ ಪ್ರದೇಶದಲ್ಲಿ ಟ್ರೀ ಪಾರ್ಕ್ ಮತ್ತು ವಿವಿಧ ಯೋಜನೆ ಕೈಗೊಳ್ಳಲಾಗುತ್ತದೆ. ಸಚಿವ ಎಂ.ಬಿ.ಪಾಟೀಲ್ ಸ್ಥಳ ಪರಿಶೀಲನೆ ಬಳಿಕ ಮಾತನಾಡಿ ಯೋಜನೆಯ ವಿವರಗಳನ್ನು ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೈಯಪ್ಪನಹಳ್ಳಿಯಲ್ಲಿರುವ 119 ಎಕರೆ ಎನ್‌ಜಿಇಎಫ್ ಕಾರ್ಖಾನೆಯ ಭೂಮಿಯಲ್ಲಿ 65 ಎಕರೆ ವಿಸ್ತೀರ್ಣದ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗುವುದು. ಇದರ ಮೊದಲ ಹಂತವು ಮಾರ್ಚ್‌ನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದರು.

ಯೋಜನೆಯ ಪ್ರಮುಖ ಅಂಶಗಳು

  • ಈ ಯೋಜನೆಯನ್ನು 4 ಹಂತಗಳಲ್ಲಿ (1, 1A, 1B ಮತ್ತು 2) ಒಟ್ಟು ರೂ. 37.75 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲಾಗುವುದು. ಮೊದಲ ಹಂತಕ್ಕಾಗಿ ಈಗಾಗಲೇ ರೂ. 11.50 ಕೋಟಿ ಬಿಡುಗಡೆ ಮಾಡಲಾಗಿದೆ.
  • ಪ್ರಸ್ತುತ ಈ ಜಾಗದಲ್ಲಿ ಸುಮಾರು 8,500 ಮರಗಳಿದ್ದು, ಯಾವುದೇ ಮರವನ್ನು ಕಡಿಯಲಾಗುವುದಿಲ್ಲ. ನೀಲಗಿರಿ ಮರಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗುತ್ತದೆ.
  • ಎನ್‌ಜಿಇಎಫ್ ಆವರಣದಲ್ಲಿರುವ ಆಡಳಿತಾತ್ಮಕ ಕಟ್ಟಡಗಳು ಮತ್ತು ಕೈಗಾರಿಕಾ ಶೆಡ್‌ಗಳು ಉತ್ತಮವಾದ ಸ್ಥಿತಿಯಲ್ಲಿದೆ ಎಂದು ಐಐಎಸ್‌ಸಿ ತಜ್ಞರು ಪ್ರಮಾಣೀಕರಿಸಿದ್ದಾರೆ. ಈ ಕಟ್ಟಡಗಳನ್ನು ನವೀಕರಿಸಿ ಮತ್ತು ಮರುರೂಪಿಸಿ ಬಳಸಿಕೊಳ್ಳಲಾಗುತ್ತದೆ.
  • ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕ್ ಮೋಟಾರ್ ಶೆಡ್‌ಗಳಲ್ಲಿ ತಲಾ 15,000 ಆಸನ ಸಾಮರ್ಥ್ಯದ ಎರಡು ಸಮಾವೇಶ ಕೇಂದ್ರಗಳನ್ನು ನಿರ್ಮಿಸಲಾಗುವುದು. ಇವುಗಳನ್ನು ಸಮ್ಮೇಳನಗಳು, ಸಮಾರಂಭಗಳು ಮತ್ತು ಸೆಮಿನಾರ್‌ಗಳಿಗೆ ಬಳಸಲಾಗುವುದು.
  • ಕಾಂಪೌಂಡ್‌ನ ಹೊರಗಿನ 4.5 ಎಕರೆ ಜಾಗದಲ್ಲಿ 5,000 ರಿಂದ 7,000 ವಾಹನಗಳ ನಿಲುಗಡೆಗೆ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತದೆ.
  • ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (KITS) ವತಿಯಿಂದ ಇನ್ನೋವರ್ಸ್ (Innoverse) ಎಂಬ ಸ್ಟಾರ್ಟಪ್ ಇನ್ಕ್ಯೂಬೇಶನ್ ಸೆಂಟರ್ ಸ್ಥಾಪಿಸಲಾಗುತ್ತದೆ.
  • ಐಟಿ-ಬಿಟಿ ಇಲಾಖೆಯು ಸುಮಾರು ರೂ. 100 ಕೋಟಿ ಅಂದಾಜು ವೆಚ್ಚದಲ್ಲಿ ತಂತ್ರಜ್ಞಾನ ನಾವೀನ್ಯತೆ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಿದೆ.

ಡಿ.ಕೆ.ಶಿವಕುಮಾರ್ ಯೋಜನೆ ಟ್ರೀ ಪಾರ್ಕ್: ಕೆಲವು ದಿನಗಳ ಹಿಂದೆ ನಗರದ ವಿವಿಧ ಬಡಾವಣೆಗಳಲ್ಲಿ ‘ಬೆಂಗಳೂರು ನಡಿಗೆ’ ಕಾರ್ಯಕ್ರಮ ಕೈಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟ್ರೀ ಪಾರ್ಕ್ ಯೋಜನೆಯನ್ನು ಘೋಷಣೆ ಮಾಡಿದ್ದರು.

ಬೆಂಗಳೂರು ನಗರದ ಪಾರ್ಕ್​ಗಳ ಪುನಶ್ಚೇತನದ ಜೊತೆಗೆ ಟ್ರೀ ಪಾರ್ಕ್‌ಗಳನ್ನು ನಿರ್ಮಾಣ ಮಾಡುವ ಮೂಲಕ ವಾಹನಗಳಿಂದ ಆಗುತ್ತಿರುವ ವಾಯು ಮಾಲಿನ್ಯ ನಿಯಂತ್ರಣ ಮಾಡುವ ಜೊತೆಗೆ ಮರಗಳನ್ನು ಉಳಿಸಿ, ಬೆಳೆಸಲು ತೀರ್ಮಾನಿಸಲಾಗಿದೆ.

ಬೆಂಗಳೂರು ನಗರದ 7 ಕಡೆಗಳಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಈ ಯೋಜನೆಗೆ ಸ್ಥಳ ಗುರುತಿಸುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸಹ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದರು.

ಹಲವಾರು ರಾಜ್ಯಗಳಲ್ಲಿ ಈಗಾಗಲೇ ಟ್ರೀ ಪಾರ್ಕ್ ಸ್ಥಾಪನೆ ಮಾಡಲಾಗಿದೆ. ಇದೇ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಟ್ರೀ ಪಾರ್ಕ್ ಮಾಡಿ ಜನರನ್ನು ಆಕರ್ಷಣೆ ಮಾಡುವ ಜೊತೆಗೆ ಪರಿಸರ ಸಂರಕ್ಷಣೆ ಮಾಡುವುದು ಯೋಜನೆಯ ಉದ್ದೇಶವಾಗಿದೆ.

ಟ್ರೀ ಪಾರ್ಕ್‌ನಿಂದ ದೇಶಿಯ ಮರಗಳ ಸಂರಕ್ಷಣೆಯಾಗುತ್ತದೆ. ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ. ವಾಯು ವಿವಾಹ ಮಾಡುವವರಿಗೆ ಉತ್ತಮ ವಾತಾವರಣ ಸಿಗಲಿದೆ. ಮರಗಳ ಬಗ್ಗೆ ಅಧ್ಯಯನ ಮಾಡುವವರಿಗೂ ಅನುಕೂಲವಾಗಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular