ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವದ ಯೋಜನೆ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ) ಅಥವ ಬೆಂಗಳೂರು ಸಬ್ ಅರ್ನ್ ರೈಲು ಯೋಜನೆ. 2026ರಲ್ಲಿ ರೈಲು ಓಡಿಸುವ ಗುರಿ ಹೊಂದಲಾಗಿತ್ತು. ಆದರೆ ಈಗ ಯೋಜನೆಯ ಗಡುವು ಬದಲಾಗಿದೆ, ಯೋಜನೆ ಮತ್ತಷ್ಟು ವಿಳಂಬವಾಗಲಿದೆ.
4 ಕಾರಿಡಾರ್ಗಳ 148 ಕಿ.ಮೀ.ಉದ್ದದ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯನ್ನು 40 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಗಡುವು 2025ರ ಅಕ್ಟೋಬರ್ನಲ್ಲಿಯೇ ಮುಕ್ತಾಯಗೊಂಡಿದೆ.
ಕರ್ನಾಟಕ ಸರ್ಕಾರ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯನ್ನು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನ ಮಾಡುತ್ತಿದೆ. ಈಗ ಯೋಜನೆಗೆ 2030ರ ಮಾರ್ಚ್ ಎಂದು ಹೊಸ ಗಡುವು ನೀಡಲಾಗಿದ್ದು, ಯೋಜನೆ ಸುಮಾರು 4 ವರ್ಷ ವಿಳಂಬವಾಗಲಿದೆ.
ಯೋಜನೆ ವಿವರ: ಅಕ್ಟೋಬರ್ 2026ರಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯಲ್ಲಿ ಒಂದು ಕಾರಿಡಾರ್ ಉದ್ಘಾಟನೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಟೆಂಡರ್ ವಿಚಾರದಲ್ಲಿ ಆಗಿರುವ ಗೊಂದಲದ ಕಾರಣ ಯೋಜನೆ ವಿಳಂಬವಾಗಿದೆ, 2026ರಲ್ಲಿ ಈ ಯೋಜನೆ ರೈಲು ಓಡುವುದಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಕೈಗೊಂಡಿರುವ ಯೋಜನೆ ಇದು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕೆ-ರೈಡ್ ಬೆಂಗಳೂರು ಸಬ್ ಅರ್ಬನ್ ಕಾರಿಡಾರ್ನಲ್ಲಿ 2026ರಲ್ಲಿ ರೈಲು ಓಡಿಸಲು ಸಾಧ್ಯವಿಲ್ಲ ಎಂದು ವಿವರಣೆ ನೀಡಿದೆ.
ಕೆ-ರೈಡ್ ಪ್ರಕಾರ ಪರಿಷ್ಕೃತ ಗಡುವು ಬೆನ್ನಿಗಾನಹಳ್ಳಿ-ಚಿಕ್ಕಬಣಾವರ 25 ಕಿ.ಮೀ. (ಮಲ್ಲಿಗೆ) ಕಾರಿಡಾರ್ ಡಿಸೆಂಬರ್ 2028ಕ್ಕೆ ಪೂರ್ಣವಾಗಲಿದೆ. 46 ಕಿ.ಮೀ. ಹೀಲಲಿಗೆ-ರಾಜನಕುಂಟೆ (ಕನಕ) ಕಾರಿಡಾರ್ ಜೂನ್ 2029ಕ್ಕೆ ಪೂರ್ಣಗೊಳ್ಳಲಿದೆ.
41 ಕಿ.ಮೀ. ಕೆಎಸ್ಆರ್ ಬೆಂಗಳೂರು-ಯಲಹಂಕ-ದೇವನಹಳ್ಳಿ (ಸಂಪಿಗೆ) ಕಾರಿಡಾರ್ ಮತ್ತು 35 ಕಿ.ಮೀ. ಕೆಂಗೇರಿ-ವೈಟ್ಫೀಲ್ಡ್ (ಪಾರಿಜಾತ) 2030ರ ಮಾರ್ಚ್ನಲ್ಲಿ ಪೂರ್ಣಗೊಳ್ಳಲಿದೆ. ಕೆ-ರೈಡ್ ನೀಡಿರುವ ಮಾಹಿತಿಯಂತೆ ವಿವಿಧ ಕಾರಣಕ್ಕೆ ಯೋಜನೆ ವಿಳಂಬವಾಗುತ್ತಿದ್ದು, ಗಡುವು ವಿಸ್ತರಣೆ ಮಾಡಲಾಗಿದೆ.
ಯೋಜನೆಗೆ ಮೂಲ ಸೌಕರ್ಯ ಒದಗಿಸುವುದು ಮಾತ್ರವಲ್ಲ. ಮೆಟ್ರೋ ಮಾದರಿ ರೈಲು ಬೋಗಿ ಖರೀದಿಗೆ ಸಹ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಇನ್ನೂ ಅಂತಿಮ ಒಪ್ಪಿಗೆ ನೀಡಿಲ್ಲ. ಬೋಗಿಗಳ ಉತ್ಪಾದನೆಗೆ ಸುಮಾರು ಒಂದೂವರೆ ವರ್ಷ ಬೇಕು ಎಂದು ಅಂದಾಜಿಸಲಾಗಿದೆ.
ಕನಕ ಮತ್ತು ಮಲ್ಲಿಗೆ ಕಾರಿಡಾರ್ ಟೆಂಡರ್ ಪಡೆದಿದ್ದ ಎಲ್ & ಟಿ ಅದರಿಂದ ವಾಪಸ್ ಹೋಗಿದೆ. ಆದ್ದರಿಂದ ಈಗ ಕೆ-ರೈಡ್ ಹೊಸ ಟೆಂಡರ್ ಕರೆದು ಕಾಮಗಾರಿಯನ್ನು ಮುಂದುವರಸಲು ಸೂಚಿಸಬೇಕಿದೆ.
ಮಲ್ಲಿಗೆ ಕಾರಿಡಾರ್ಗೆ ಭೂ ಸ್ವಾಧೀನ ಪೂರ್ಣಗೊಂಡಿದೆ. ಆದರೆ ಉಳಿದ ಕಾರಿಡಾರ್ ಭೂ ಸ್ವಾಧೀನ ಮತ್ತು ಭೂಮಿಯನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ ಬಾಕಿ ಇದೆ. ಆದ್ದರಿಂದಲೇ ನಿಗದಿತ ಗಡುವಿನಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಕೆ-ರೈಡ್ ಹೇಳಿದೆ.
ಡಿಸೆಂಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಮತ್ತು ತೆಲಂಗಾಣದ ಜೆ ಚೊಕ್ಕಾ ರಾವ್ ದೇವದುಲ ಲಿಫ್ಟ್ ನೀರಾವರಿ ಯೋಜನೆಯ ಪ್ರಗತಿ ಪರಿಶೀಲನೆ ಮಾಡಿದ್ದರು. ಆಗ ವೆಚ್ಚ ಅಧಿಕವಾಗುತ್ತಿದ್ದು, ಯೋಜನೆಯನ್ನು ಬೇಗ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದರು.
ಸುಮಾರು 4 ದಶಕದಿಂದ ಚರ್ಚೆಯ ಹಂತದಲ್ಲಿದ್ದ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 2020ರಲ್ಲಿ ಅನುಮೋದನೆ ಸಿಕ್ಕಿತ್ತು. ಬಳಿಕ ಶಂಕು ಸ್ಥಾಪನೆ ಮಾಡಿ 41 ತಿಂಗಳಿನಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು.

