ಈಗಾಗಲೇ ಕುಂಟುತ್ತಾ ಸಾಗುತ್ತಿರುವ ಬೆಂಗಳೂರು ಉಪನಗರ ರೈಲು ಯೋಜನೆಯ ‘ಮಲ್ಲಿಗೆ’ ಕಾರಿಡಾರ್‌ಗೆ ಟೆಂಡರ್ ಕರೆಯಲಾಗಿದೆ. ಈ ಯೋಜನೆ ಅನುಷ್ಠಾನಕ್ಕಾಗಿಯೇ ಕರ್ನಾಟಕ ಸರ್ಕಾರ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಸ್ಥಾಪನೆ ಮಾಡಿದೆ.
24.8 ಕಿ.ಮೀ.ದೂರದ ಬೈಯಪ್ಪನಹಳ್ಳಿ-ಚಿಕ್ಕಬಣಾವರ ಸಂಪರ್ಕ ಕಲ್ಪಿಸಲಿದೆ ‘ಮಲ್ಲಿಗೆ’ ಕಾರಿಡಾರ್. ಸಬ್ ಅರ್ಬನ್ ರೈಲು ಯೋಜನೆಯಲ್ಲಿ ಮೊದಲು ಆರಂಭವಾಗಲಿದೆ ಈ ಕಾರಿಡಾರ್ ಎಂದು ಅಂದಾಜಿಸಲಾಗಿದೆ.
2022ರ ಸೆಪ್ಟೆಂಬರ್‌ನಲ್ಲಿ ಈ ಕಾರಿಡಾರ್ ಟೆಂಡರ್ ಅನ್ನು ಎಲ್&ಟಿಗೆ ಹಂಚಿಕೆ ಮಾಡಲಾಗಿತ್ತು. ಆದರೆ ವಿವಿಧ ಕಾರಣವನ್ನು ಮುಂದಿಟ್ಟುಕೊಂಡು ಎಲ್&ಟಿ ಯೋಜನೆಯಿಂದ ಹೊರ ಹೋಗಿತ್ತು. ಆದ್ದರಿಂದ ಹೊಸ ಟೆಂಡರ್ ಕರೆಯಲಾಗಿದೆ.
ಟೆಂಡರ್ ವಿವರ: 2025ರ ನವೆಂಬರ್‌ನಲ್ಲಿ ಕೆ-ರೈಡ್ ‘ಮಲ್ಲಿಗೆ’ ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಕರೆದಿತ್ತು. ಈ ಟೆಂಡರ್‌ನಲ್ಲಿ ಪಿಜೆಬಿ ಇಂಜಿನಿಯರ್ಸ್, ಎನ್‌ಸಿಸಿ ಕಡಿಮೆ ಮೊತ್ತದ ಬಿಡ್ ಮಾಡಿವೆ.
ಮನಿ ಕಂಟ್ರೋಲ್ ವರದಿಯ ಪ್ರಕಾರ ಪ್ಯಾಕೇಜ್-1 (ಬೆನ್ನಿಗಾನಹಳ್ಳಿ-ಶೆಟ್ಟಿಹಳ್ಳಿ) ಎನ್‌ಸಿಸಿ ಸಂಸ್ಥೆಯು ಏಕೈಕ ಬಿಡ್‌ದಾರರು. 1,085 ಕೋಟಿ ರೂಪಾಯಿಗಳ ಮೊತ್ತವನ್ನು ಅದು ನಮೂದಿಸಿದೆ.
ಈ ಭಾಗವು ಡಬಲ್ ಡೆಕ್ಕರ್ ವಯಡಕ್ಟ್ ವಿನ್ಯಾಸ ಮತ್ತು ನಿರ್ಮಾಣವನ್ನು ಒಳಗೊಂಡಿದೆ. ಇದರಲ್ಲಿ ಲೊಟ್ಟೆಗೊಲ್ಲಹಳ್ಳಿ ಮತ್ತು ಯಶವಂತಪುರ ನಡುವಿನ 1.2 ಕಿಮೀ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಬಿಬಿಎಂಪಿ ರಸ್ತೆ ಮೇಲ್ಸೇತುವೆ ಮತ್ತು ಎರಡನೇ ಹಂತದಲ್ಲಿ ಉಪನಗರ ರೈಲ್ವೆ ಹಳಿಗಳು ಬರಲಿವೆ.
ಪ್ಯಾಕೇಜ್ 2 (ಬೆನ್ನಿಗಾನಹಳ್ಳಿ-ಹೆಬ್ಬಾಳ) ಕಾಮಗಾರಿಗಾಗಿ ಪಿಜೆಬಿ ಇಂಜಿನಿಯರ್ಸ್ ಸಂಸ್ಥೆಯು 263.49 ಕೋಟಿ ರೂಪಾಯಿಗಳನ್ನು ನಮೂದಿಸುವ ಮೂಲಕ ಅತ್ಯಂತ ಕಡಿಮೆ ಬಿಡ್‌ದಾರರಾಗಿದೆ. ಇದೇ ಕಾಮಗಾರಿಗೆ ಎನ್‌ಸಿಸಿ ಸಂಸ್ಥೆಯು 541 ಕೋಟಿ ರೂಪಾಯಿಗಳ ಬಿಡ್ ಸಲ್ಲಿಸಿದೆ.
ನಾವು ಹಣಕಾಸು ಬಿಡ್‌ಗಳನ್ನು ತೆರೆದಿದ್ದೇವೆ, ಆದರೆ ಇನ್ನೂ ಟೆಂಡರ್‌ಗಳನ್ನು ಯಾರಿಗೂ ನೀಡಿಲ್ಲ. ಕೆ-ರೈಡ್ ಆಡಳಿತ ಮಂಡಳಿಯು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
148 ಕಿಲೋಮೀಟರ್ ಉದ್ದದ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರವು ಅಕ್ಟೋಬರ್ 2020ರಲ್ಲಿ ಅನುಮೋದನೆ ನೀಡಿತ್ತು ಮತ್ತು ಇದನ್ನು 2026ರ ವೇಳೆಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು.
ಜೂನ್ 2022ರಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದ ಪ್ರಧಾನಿ ನರೇಂದ್ರ ಮೋದಿ 4 ಕಾರಿಡಾರ್‌ಗಳ ಈ ಯೋಜನೆಯನ್ನು 40 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದರು. ಆದರೆ ಈಗ ಯೋಜನೆಗೆ 2026ರ ಗಡುವು ನೀಡಲಾಗಿದೆ.

