ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಕ್ಷೇಪಾರ್ಹ ಬರಹಗಳುಳ್ಳ ಪೋಸ್ಟರ್ ಗಳನ್ನು ಕಿಡಿಗೇದಿಗಳು ಅಂಟಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ,
ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ನಾಯಕರನ್ನು ಅವಹೇಳನ ಮಾಡುವಂತಹ ಪೋಸ್ಟರ್‌ಗಳು ಪ್ರತ್ಯಕ್ಷವಾಗಿವೆ. ಇದು ಬಿಜೆಪಿ ನಾಯಕರ ಕೆಂಗಣಿಗೆ ಗುರಿಯಾಗಿದೆ.
ಮಲ್ಲೇಶ್ವರಂ 15ನೇ ಕ್ರಾಸ್‌ನ ಬಿಎಂಟಿಸಿ ಬಸ್ ನಿಲ್ದಾಣದ ಗೋಡೆ ಹಾಗೂ ಐತಿಹಾಸಿಕ ಕಾಡುಮಲ್ಲೇಶ್ವರ ದೇವಸ್ಥಾನದ ಪಕ್ಕದ ಕಾಂಪೌಂಡ್ ಗೋಡೆಗೆ ಕಿಡಿಗೇಡಿಗಳು ಬಿಜೆಪಿ ನಯಕರ ವಿರುದ್ಧ ಅವಹೇಳನಕಾರಿ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.
ಮಲ್ಲೇಶ್ವರಂ ಬಸ್ ನಿಲ್ದಾಣದಲ್ಲಿ ಮೂರು ಪ್ರತ್ಯೇಕ ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು, ಇದರಲ್ಲಿ ಬಿಜೆಪಿ ನಾಯಕರ ವಿರುದ್ಧ ಆಕ್ಷೇಪಾರ್ಹ ಬರಹಗಳನ್ನು ಮುದ್ರಿಸಲಾಗಿದೆ. ಯಾರ ಕಣ್ಣಿಗೂ ಬೀಳದಂತೆ ನಿನ್ನೆ ಮಧ್ಯರಾತ್ರಿಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಇಂದು ಮುಂಜಾನೆ ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯರು ಹಾಗೂ ಕಾರ್ಯಕರ್ತರು ಅಂಟಿಸಲಾಗಿದ್ದ ಪೋಸ್ಟರ್‌ಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಹರಿದು ತೆರವುಗೊಳಿಸಿದ್ದಾರೆ.
ದೇವಸ್ಥಾನದ ಪಕ್ಕದಲ್ಲೇ ಇಂತಹ ಪೋಸ್ಟರ್‌ಗಳನ್ನು ಅಂಟಿಸಿರುವುದಕ್ಕೆ ಸ್ಥಳೀಯರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಜಯನಗರದಲ್ಲಿ ಫಾರಂ-7 ದುರ್ಬಳಕೆ ಆರೋಪ: ಐವರ ವಿರುದ್ಧ FIR ದಾಖಲು
ಬೆಂಗಳೂರು: ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಫಾರಂ-7 ದುರ್ಬಳಕೆ ಮಾಡಿ ಮತದಾರರ ಹೆಸರುಗಳನ್ನು ಡಿಲಿಟ್ ಮಾಡಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಜಯನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅಥವಾ ಹೆಸರನ್ನು ಸೇರಿಸುವುದನ್ನು ಆಕ್ಷೇಪಿಸಲು ಇರುವ ಅರ್ಜಿಯಾಗಿರುವ ಫಾರ್ಮ್ 7 ನ್ನು ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಜಯನಗರದಲ್ಲಿ ಒಟ್ಟು 5,698 ಮತದಾರರ ಹೆಸರುಗಳನ್ನ ಪಟ್ಟಿಯಿಂದ ಡಿಲೀಟ್ ಮಾಡಲು ಫಾರಂ-7 ಅರ್ಜಿಗಳನ್ನ ಸಲ್ಲಿಸಿರುವ ಬಗ್ಗೆ ಸೌಮ್ಯಾ ರೆಡ್ಡಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಅರ್ಜಿಗಳ ಹಿಂದೆ ಉದ್ದೇಶಪೂರ್ವಕವಾಗಿ ಮತದಾರರ ಹೆಸರುಗಳನ್ನ ಅಳಿಸುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಅರ್ಜಿಗಳಲ್ಲಿ ಸಿ. ರಮೇಶ್ ಮತ್ತು ರೂಪಾ ಎಂಬುವವರ ಹೆಸರನ್ನ ಬಳಸಲಾಗಿದೆ. ಆದರೆ, ತಮ್ಮ ಯಾವುದೇ ಮಾಹಿತಿ ಅಥವಾ ಒಪ್ಪಿಗೆಯಿಲ್ಲದೆ ತಮ್ಮ ವೈಯಕ್ತಿಕ ಮಾಹಿತಿಯನ್ನ ನಕಲು ಮಾಡಿ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ದಾಖಲೆಗಳೂ ಇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಯಾವ ವಾರ್ಡ್‌ನಲ್ಲಿ ಎಷ್ಟು ಹೆಸರು ಡಿಲೀಟ್?
ವಾರ್ಡ್ 168 – ಹಲಸೂರು: 54 ಮತದಾರರು
ವಾರ್ಡ್ 169 – ಬೈರಸಂದ್ರ: 525 ಮತದಾರರು
ವಾರ್ಡ್ 170 – ಬೈರಸಂದ್ರ: 719 ಮತದಾರರು
ವಾರ್ಡ್ 171 – ಗುರುಪ್ಪನಪಾಳ್ಯ: 4,327 ಮತದಾರರು
ವಾರ್ಡ್ 177, 178, 179 – ಜಯನಗರ: ಒಟ್ಟು 82 ಮತದಾರರು
ಪ್ರಕರಣದಲ್ಲಿ ಬಿಜೆಪಿ ಮುಖಂಡರಾದ ರಾಮಕೃಷ್ಣ, ಯೋಗೇಶ್ ಸೇರಿದಂತೆ ಒಟ್ಟು ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರಿನಲ್ಲಿ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

