ಬೆಂಗಳೂರು: ಜೀವಗಳನ್ನು ಉಳಿಸಬೇಕಾದ ಪಶುವೈದ್ಯಕೀಯ ವಿದ್ಯಾರ್ಥಿ ಅಮಾಯಕ ಬೀದಿ ನಾಯಿಯ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಹೆಬ್ಬಾಳ ಸರ್ಕಾರಿ ಪಶುವೈದ್ಯಕೀಯ ಕಾಲೇಜಿನ ದ್ವಿತೀಯ ವರ್ಷದ ಮಾಸ್ಟರ್ ಆಫ್ ವೆಟರಿನರಿ ಸೈನ್ಸ್ (MVSc) ವಿದ್ಯಾರ್ಥಿ ಮಂಜುನಾಥ್, ತನ್ನ ವೈದ್ಯಕೀಯ ಅಭ್ಯಾಸಕ್ಕಾಗಿ ಆರೋಗ್ಯವಾಗಿದ್ದ ನಾಯಿಯ ಕಾಲನ್ನು ಉದ್ದೇಶಪೂರ್ವಕವಾಗಿ ಮುರಿದು, ಬಳಿಕ ಅದಕ್ಕೆ ಚಿಕಿತ್ಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಖಾಸಗಿ ವ್ಯಕ್ತಿಗಳ ಮೂಲಕ ಬೀದಿ ನಾಯಿಗಳನ್ನು ಹಿಡಿಸಿಕೊಂಡು, ಖಾಸಗಿ ಆಸ್ಪತ್ರೆಯಲ್ಲಿ ನಾಯಿಯ ಕಾಲನ್ನು ಮುರಿದು, ನಂತರ ಅದೇ ನಾಯಿಯನ್ನು ಹೆಬ್ಬಾಳದ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ನಡೆಸಿ ವೈದ್ಯಕೀಯ ಅಭ್ಯಾಸ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಸಂಶೋಧನೆಯ ನೆಪದಲ್ಲಿ ಕ್ರೌರ್ಯ: ಹೆಬ್ಬಾಳ ವೆಟರಿನರಿ ಕಾಲೇಜಿನಲ್ಲಿ ಆರ್ಥೋಪೆಡಿಕ್ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದ ವಿದ್ಯಾರ್ಥಿ ಮಂಜುನಾಥ್, ತನ್ನ ಸರ್ಜರಿ ಅಭ್ಯಾಸಕ್ಕಾಗಿ ಬೀದಿ ನಾಯಿಗಳನ್ನು ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ.
QR ಕಾಲರ್‌ನಿಂದ ಬಯಲಾದ ಪ್ರಕರಣ
ಕೆಲ ದಿನಗಳ ಹಿಂದೆ ಬೆಂಗಳೂರಿನ ದೊಡ್ಡಕಣ್ಣಹಳ್ಳಿ ಪ್ರದೇಶದಲ್ಲಿ ಒಂದು ಬೀದಿ ನಾಯಿ ಕಾಣೆಯಾಗಿತ್ತು. ನಾಯಿಗೆ ಆಹಾರ ನೀಡುತ್ತಿದ್ದವರು ಅದರ ಕುತ್ತಿಗೆಗೆ QR ಕೋಡ್ ಇರುವ ಕಾಲರ್ ಹಾಕಿದ್ದರು. ನಾಯಿ ಕಾಣೆಯಾದ ಬಳಿಕ QR ಕೋಡ್ ಮೂಲಕ ಅದನ್ನು ಹುಡುಕಿದಾಗ, ಅದೇ ಪ್ರದೇಶದಲ್ಲಿರುವ PrimeCare Veterinary Hospitalಗೆ ನಾಯಿ ಹೋಗಿರುವುದು ಪತ್ತೆಯಾಗಿದೆ.
ನಂತರ ದೂರುದಾರರಾದ ಸಾಧನಾ ಹೆಗಡೆ ಅವರು ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಅವರು ಹೆಬ್ಬಾಳದ ಪ್ರಾಣಿ ಆಸ್ಪತ್ರೆಗೆ ತೆರಳಿದಾಗ, ನಾಯಿಯ ಕಾಲಿಗೆ ಈಗಾಗಲೇ ಶಸ್ತ್ರಚಿಕಿತ್ಸೆ ನಡೆಸಿ ಚಿಕಿತ್ಸೆ ನೀಡಿರುವುದು ಕಂಡುಬಂದಿದೆ.
ಖಾಸಗಿ ಆಸ್ಪತ್ರೆಯಲ್ಲೇ ಕಾಲು ಮುರಿದ ಆರೋಪ
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಾ. ಆಸಿಫ್ ಅವರು ನಾಯಿಯ ಕಾಲು ಮುರಿದ ಬಳಿಕ ಅದನ್ನು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಇದೇ ವೇಳೆ ದೊಡ್ಡಕಣ್ಣಹಳ್ಳಿಯಲ್ಲಿರುವ ಖಾಸಗಿ ಪಶುವೈದ್ಯಕೀಯ ಆಸ್ಪತ್ರೆಯು ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಅನುಮತಿ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.
ದಾಳಿ ವೇಳೆ 12 ನಾಯಿಗಳು, ಒಂದು ಬೆಕ್ಕು ಪತ್ತೆ
ಘಟನೆ ಬಳಿಕ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಆಸ್ಪತ್ರೆಯಲ್ಲಿ ಪ್ರಾಣಿಗಳ ಮೇಲೆ ಅರಿವಳಿಕೆ ನೀಡದೆ ಪ್ರಯೋಗಗಳನ್ನು ನಡೆಸುತ್ತಿರುವುದು ಹಾಗೂ ಪ್ರಾಣಿಗಳನ್ನು ಅಮಾನವೀಯ ಪರಿಸ್ಥಿತಿಯಲ್ಲಿ ಅಕ್ರಮವಾಗಿ ಇರಿಸಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.
ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ವೇಳೆ 12 ನಾಯಿಗಳು ಮತ್ತು ಒಂದು ಬೆಕ್ಕು ಅನಾರೋಗ್ಯದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮತ್ತೊಂದು ನಾಯಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ GBAಯ ಪಶುಸಂಗೋಪನಾ ಇಲಾಖೆ ಆಸ್ಪತ್ರೆ ಆಡಳಿತಕ್ಕೆ ನೋಟಿಸ್ ಜಾರಿ ಮಾಡಿದ್ದು, ಆಸ್ಪತ್ರೆಯನ್ನು ಮುಚ್ಚಲಾಗಿದೆ.
ವಿದ್ಯಾರ್ಥಿ, ವೈದ್ಯರ ವಿರುದ್ಧ FIR
ಘಟನೆಗೆ ಸಂಬಂಧಿಸಿದಂತೆ ಪ್ರಾಣಿ ಪ್ರಿಯರು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಶುವೈದ್ಯಕೀಯ ವಿದ್ಯಾರ್ಥಿ ಮಂಜುನಾಥ್ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಆಸಿಫ್ ವಿರುದ್ಧ 1960ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ (Prevention of Cruelty to Animals Act) ಮತ್ತು BNSನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ FIR ದಾಖಲಿಸಲಾಗಿದೆ. ಅಕ್ರಮವಾಗಿ ನಾಯಿಗಳನ್ನು ಹಿಡಿಯುವವರನ್ನು ಪತ್ತೆಹಚ್ಚಿ, ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಾಣಿ ಪ್ರಿಯರು ಪೊಲೀಸರು ಹಾಗೂ GBAಗೆ ಮನವಿ ಮಾಡಿದ್ದಾರೆ.

