ಬೆಂಗಳೂರು ನಗರದ ಜನರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್ ನೀಡಿದೆ. ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಕಾಮಗಾರಿ ಅಂತಿಮವಾಗುತ್ತಿದೆ. ಈಗಾಗಲೇ ಫ್ಲೈ ಓವರ್‌ನ ಒಂದು ಬದಿಯಲ್ಲಿ ವಾಹನಗಳು ಸಂಚಾರವನ್ನು ನಡೆಸುತ್ತಿವೆ.
ರಾಗಿಗುಡ್ಡ-ಸಿಲ್ಕ್ ಬೋರ್ಡ್ ನಡುವಿನ ಡಬಲ್ ಡೆಕ್ಕರ್ ಫ್ಲೈ ಓವರ್‌ಗೆ ಸಿಲ್ಕ್ ಬೋರ್ಡ್ ಬಳಿ ರ‍್ಯಾಂಪ್ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ. ಬಿಎಂಆರ್‌ಸಿಎಲ್ ಮಾಹಿತಿ ಪ್ರಕಾರ ಫೆಬ್ರವರಿ ಅಂತ್ಯಕ್ಕೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆ ಮಾಡುವ ಪ್ರಮುಖ ಯೋಜನೆ ಇದಾಗಿದೆ. ಸುಮಾರು 449 ಕೋಟಿ ರೂ. ವೆಚ್ಚದ ಯೋಜನೆಯ ಪೂರ್ಣಗೊಳ್ಳಲಿದ್ದು, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್, ಹೊಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
2024ರಲ್ಲಿ ರಾಗಿಗುಡ್ಡ-ಸಿಲ್ಕ್ ಬೋರ್ಡ್ ನಡುವಿನ ಒಂದು ಪಥ ವಾಹನ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ ಮತ್ತೊಂದು ಪಥದ ಕಾಮಗಾರಿ 42 ಮೀಟರ್ ಸ್ಟೀಲ್ ಬ್ರಿಡ್ಜ್ ಅಳವಡಿಕೆ ಮಾಡುವ ಕಾರಣಕ್ಕೆ ವಿಳಂಬವಾಗಿತ್ತು.
ಸಿಲ್ಕ್ ಬೋರ್ಡ್ ಬಳಿಕ ಹಾಲಿ ಇರುವ ರಸ್ತೆಯ ಮೇಲೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಿ, ಅಲ್ಲಿಂದ ಡಬಲ್ ಡೆಕ್ಕರ್ ಫ್ಲೈ ಓವರ್‌ಗೆ ಆಗಮಿಸಲು ರ‍್ಯಾಂಪ್ ನಿರ್ಮಾಣ ಮಾಡುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ಬ್ರಿಡ್ಜ್ ನಿರ್ಮಾಣ ಪೂರ್ಣಗೊಂಡಿದೆ. ಕಾಂಕ್ರೀಡ್ ಸ್ಲ್ಯಾಬ್‌ಗಳನ್ನು ಹಾಕಲಾಗುತ್ತಿದೆ. ಸಿವಿಲ್ ಕೆಲಸಗಳು ಫೆಬ್ರವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಆದ್ದರಿಂದ ಮಾರ್ಚ್ ತಿಂಗಳಿನಿಂದ ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗಲಿದೆ. ಆ ಬಳಿಕ ಹೊಸೂರು ರಸ್ತೆಯ ವಾಹನ ದಟ್ಟಣೆ ಗಣನೀಯ ಮಟ್ಟದಲ್ಲಿ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಹೆಚ್‌ಎಸ್‌ಆರ್ ಲೇಔಟ್, ಬಿಟಿಎಂ ಲೇಔಟ್ ಸಂಪರ್ಕಿಸುವ ಬ್ರಿಡ್ಜ್ ನಿರ್ಮಾಣ ತಡವಾದ ಕಾರಣ ಫ್ಲೈ ಓವರ್ ಸಂಪೂರ್ಣ ವಾಹನ ಸಂಚಾರಕ್ಕೆ ಮುಕ್ತವಾಗಿರಲಿಲ್ಲ. ಈ ಮಾರ್ಗದಲ್ಲಿ ಸಂಚಾರ ನಡೆಸುವ ವಾಹನ ಸವಾರರು ಬಿಟಿಎಂ ಲೇಔಟ್ ಮತ್ತು ಸಿಲ್ಕ್ ಬೋರ್ಡ್ ಸಿಗ್ನಲ್‌ಗಳನ್ನು ತಪ್ಪಿಸಿದರೆ ನಿರಾಳರಾಗಲಿದ್ದಾರೆ.
ಎಲ್ಲಾ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಬಳಿಕ ರಸ್ತೆಯಲ್ಲಿ ಅಗತ್ಯ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ, ಫ್ಲೈ ಓವರ್‌ನಲ್ಲಿ ವಾಹನ ಸಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಡಬಲ್ ಡೆಕ್ಕರ್ ಫ್ಲೈ ಓವರ್ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುವ ಮಾರ್ಗದಲ್ಲಿ ಈಗಾಗಲೇ ನಮ್ಮ ಮೆಟ್ರೋ ರೈಲು ಸಂಚಾರವನ್ನು ನಡೆಸುತ್ತಿದೆ.
ಫ್ಲೈ ಓವರ್‌ನ ಮೊದಲ ಹಂತದಲ್ಲಿ ವಾಹನಗಳು ಸಂಚಾರವನ್ನು ನಡೆಸುತ್ತದೆ. 2ನೇ ಹಂತದಲ್ಲಿ ನಮ್ಮ ಮೆಟ್ರೋ ರೈಲು ಓಡುತ್ತದೆ. ಈ ಮೆಟ್ರೋ ರೈಲು ಸಂಚಾರ 2025ರ ಆಗಸ್ಟ್‌ನಲ್ಲಿ ಆರಂಭವಾದ ಬಳಿಕ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ.
ಈಗ ಡಬಲ್ ಡೆಕ್ಕರ್ ಫ್ಲೈ ಓವರ್ ಎರಡು ಕಡೆ ಸಂಚಾರಕ್ಕೆ ಮುಕ್ತವಾದರೆ ವಾಹನ ದಟ್ಟಣೆ ಇನ್ನೂ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ರಾಗಿಗುಡ್ಡ ಮತ್ತು ಬನಶಂಕರಿ ನಡುವೆ ಸಂಚಾರ ದಟ್ಟಣೆ ಉಂಟಾಗಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಫ್ಲೈ ಓವರ್‌ನ ಎಲ್ಲಾ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ಫೆಬ್ರವರಿ ಅಂತ್ಯಕ್ಕೆ ಪೂರ್ಣವಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿ ವಾಹನ ಸಂಚಾರಕ್ಕೆ ಅವಕಾಶ ನೀಡುತ್ತದೆಯೇ? ಅಥವ ವಾಹನ ಸಂಚಾರ ಪ್ರಾರಂಭಿಸುತ್ತದೆಯೇ? ಎಂಬುದು ಇನ್ನೂ ಅಂತಿಮವಾಗಿಲ್ಲ.

