ಬೆಂಗಳೂರು ನಗರದ ಮೂಲ ಸೌಕರ್ಯದ ಕುರಿತು ಚರ್ಚೆಗಳು ಸಾಮಾನ್ಯ. ಅದರಲ್ಲಿ ಪ್ರಮುಖವಾಗಿ ಕಸದ ಸಮಸ್ಯೆ. ಸರ್ಕಾರ ಎಷ್ಟು ಖರ್ಚು ಮಾಡಿದರೂ, ಎಂತಹ ತಂತ್ರಜ್ಞಾನವನ್ನು ತಂದರೂ ಸಹ ಕಸದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ನಗರದ ತ್ಯಾಜ್ಯ ಬಿಕ್ಕಟ್ಟನ್ನು ಕೇವಲ ತಂತ್ರಜ್ಞಾನ ಆಧಾರಿತವಾಗಿ ಪರಿಹರಿಸಲು ಸಾಧ್ಯವಿಲ್ಲ ಎಂದು ತಜ್ಞರು ಸಂವಾದದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ನಗರವು ಪರಿಸರ ಹದಗೆಡುವುದನ್ನು ತಪ್ಪಿಸಬೇಕಾದರೆ ಜನರ ನಡವಳಿಕೆಯಲ್ಲಿ ಬದಲಾವಣೆ ಆಗಬೇಕು. ವಿಕೇಂದ್ರೀಕೃತ ಪರಿಹಾರಗಳು, ಆರ್ಥಿಕ ವಾಸ್ತವತೆ ಮತ್ತು ನಾಗರಿಕರ ಜವಾಬ್ದಾರಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಶನ್ ಈ ಸಂವಾದ ಆಯೋಜಿಸಿತ್ತು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಲಸ್ಟರ್ ಉಪಕ್ರಮದ ಅಡಿಯಲ್ಲಿ, ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಲಸ್ಟರ್ ಈ ಕಾರ್ಯಕ್ರಮವನ್ನು ಸಂಯೋಜಿಸಿತ್ತು.
ಬೆಂಗಳೂರಿನಲ್ಲಿ ವರ್ಷಗಳ ಕಾಲ ನೀತಿ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ. ಆದರೂ ಸಹ ತ್ಯಾಜ್ಯ ನಿರ್ವಹಣೆಯು ನಗರದ ಅತ್ಯಂತ ಸವಾಲಿನ ಸಮಸ್ಯೆಯಾಗಿ ಏಕೆ ಉಳಿದಿದೆ? ಎಂಬುದನ್ನು ಈ ಚರ್ಚೆಯು ಬಹಿರಂಗ ಮಾಡಿತು.
ಎಷ್ಟು ತ್ಯಾಜ್ಯ ಉತ್ಪಾದನೆ?: ಬೆಂಗಳೂರು ನಗರದಲ್ಲಿ ಪ್ರತಿದಿನ 6,000 ಟನ್‌ಗಳಿಗಿಂತ ಹೆಚ್ಚು ತ್ಯಾಜ್ಯವನ್ನು ಉತ್ಪಾದನೆಯಾಗುತ್ತದೆ. ಇದು ತ್ಯಾಜ್ಯ ಸಂಗ್ರಹಣೆ ವ್ಯವಸ್ಥೆಗಳು, ಸಂಸ್ಕರಣಾ ಮೂಲಸೌಕರ್ಯ ಮತ್ತು ಲ್ಯಾಂಡ್‌ಫಿಲ್ (ಕಸ ಸುರಿಯುವ ಸ್ಥಳ) ಸಾಮರ್ಥ್ಯದ ಮೇಲೆ ನಿರಂತರ ಒತ್ತಡವನ್ನು ಹೇರುತ್ತಿದೆ.
ನಗರವು ದೇಶದಲ್ಲೇ ಅತ್ಯಂತ ಬಲಿಷ್ಠವಾದ ಘನತ್ಯಾಜ್ಯ ನಿರ್ವಹಣಾ ಉಪನಿಯಮಗಳನ್ನು ಹೊಂದಿದೆ. ಆದರೆ ನೀತಿಯ ಉದ್ದೇಶ ಮತ್ತು ತಳಮಟ್ಟದ ಅನುಷ್ಠಾನದ ನಡುವಿನ ಅಂತರವು ಆಶಾದಾಯಕ ಫಲಿತಾಂಶಗಳನ್ನು ಕುಂಠಿತಗೊಳಿಸುತ್ತಿದೆ ಎಂದು ತಜ್ಞರು ಹೇಳಿದರು.
ನಗರ ಮಾಲಿನ್ಯದ ಸ್ವರೂಪದಲ್ಲಿನ ಬದಲಾವಣೆಯನ್ನು ತಜ್ಞರು ಪಟ್ಟಿ ಮಾಡಿದರು. ಒಂದು ಕಾಲದಲ್ಲಿ ಕೈಗಾರಿಕಾ ತ್ಯಾಜ್ಯವು ಪರಿಸರದ ಪ್ರಮುಖ ಆತಂಕಕ್ಕೆ ಕಾರಣವಾಗಿತ್ತು, ಆದರೆ ಈಗ ಸಂಸ್ಕರಿಸದ ಒಳಚರಂಡಿ ನೀರು ಮತ್ತು ಸರಿಯಾಗಿ ನಿರ್ವಹಿಸದ ವಸತಿ ಪ್ರದೇಶದ ತ್ಯಾಜ್ಯವು ನೀರು, ಭೂಮಿ ಮತ್ತು ಪರಿಸರ ನಾಶಕ್ಕೆ ಪ್ರಮುಖ ಕಾರಣಗಳಾಗಿ ಹೊರಹೊಮ್ಮಿವೆ. ನದಿಗಳು ಮತ್ತು ಕೆರೆಗಳು ಕೇವಲ ಕೈಗಾರಿಕಾ ರಾಸಾಯನಿಕಗಳಿಂದ ಮಾತ್ರವಲ್ಲದೆ, ನಗರದ ಒಳಚರಂಡಿ ಮತ್ತು ಮಿಶ್ರ ತ್ಯಾಜ್ಯಗಳು ಅವುಗಳ ನೈಸರ್ಗಿಕ ಪುನಶ್ಚೇತನ ಸಾಮರ್ಥ್ಯವನ್ನು ಮೀರಿ ಜಲಮೂಲಗಳನ್ನು ಸೇರುತ್ತಿರುವುದರಿಂದ ಹೆಚ್ಚು ಕಲುಷಿತಗೊಳ್ಳುತ್ತಿವೆ ಎಂದರು.
ಸಂವಾದದಲ್ಲಿ ಮಾತನಾಡಿದ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮಮಣಿ ವಿ.ಕೆ. ಬೆಂಗಳೂರಿನಂತಹ ಬೃಹತ್ ನಗರದಲ್ಲಿ ತ್ಯಾಜ್ಯ ನಿರ್ವಹಣೆಯ ಪ್ರಮಾಣ ಮತ್ತು ಅದರ ಸಂಕೀರ್ಣತೆಯನ್ನು ವಿವರಿಸಿದರು. ತ್ಯಾಜ್ಯವನ್ನು ಮೂಲದಲ್ಲೇ ವರ್ಗೀಕರಿಸದಿದ್ದರೆ, ಎಷ್ಟೇ ದಕ್ಷತೆಯ ಸಂಗ್ರಹಣಾ ವ್ಯವಸ್ಥೆಯೂ ಯಶಸ್ವಿಯಾಗಲು ಸಾಧ್ಯವಿಲ್ಲ. ಅಲ್ಲದೆ, ಸಂಸ್ಕರಣಾ ಘಟಕಗಳಿಗೆ ಮಿಶ್ರ ತ್ಯಾಜ್ಯವು ಸೇರುವುದರಿಂದ ಲ್ಯಾಂಡ್‌ಫಿಲ್‌ಗಳ ಮೇಲಿನ ಅವಲಂಬನೆ ಮತ್ತು ಕಾರ್ಯಾಚರಣೆಯ ವೆಚ್ಚ ನೇರವಾಗಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಸಂಸ್ಕರಣಾ ಘಟಕಗಳು, ಗೊಬ್ಬರ ತಯಾರಿಕೆ ಘಟಕಗಳು, ಬಯೋಮೆಥನೇಶನ್ ಯುನಿಟ್‌ಗಳು ಮತ್ತು ತ್ಯಾಜ್ಯದಿಂದ ಇಂಧನ ತಯಾರಿಸುವ ಸೌಲಭ್ಯಗಳಿಗೆ ಮಿಶ್ರ ತ್ಯಾಜ್ಯವು ತಲುಪಿದಾಗ, ಈ ವ್ಯವಸ್ಥೆಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.
ಇದರ ಪರಿಣಾಮವಾಗಿ ಹೆಚ್ಚಿನ ಪ್ರಮಾಣದ ಕಸವನ್ನು ಅನಿವಾರ್ಯವಾಗಿ ಲ್ಯಾಂಡ್‌ಫಿಲ್‌ಗಳಿಗೆ ಸ್ಥಳಾಂತರಿಸಬೇಕಾಗುತ್ತದೆ. ಅಪೂರ್ಣ ತ್ಯಾಜ್ಯ ಸಂಗ್ರಹಣೆ, ಸತತವಾಗಿ ನಿರ್ಮಾಣವಾಗುವ ಕಸದ ಬ್ಲಾಕ್ ಸ್ಪಾಟ್‌ಗಳು ಮತ್ತು ನಾಗರಿಕರ ಅಸಮರ್ಪಕ ಸಹಕಾರ ಈ ಸವಾಲನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಮುಖ್ಯ ಸಂಶೋಧನಾ ವಿಜ್ಞಾನಿ ಎಚ್.ಎನ್. ಚಾಣಕ್ಯ ಮಾತನಾಡಿ, ಬೆಂಗಳೂರಿನ ಒಂದು ಶತಮಾನಕ್ಕೂ ಹೆಚ್ಚಿನ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ವಿವರಿಸಿದರು. ಹಿಂದಿನ ಕಾಲದಲ್ಲಿ ತ್ಯಾಜ್ಯವು ಹೆಚ್ಚಾಗಿ ಜೈವಿಕ ಸ್ವರೂಪದ್ದಾಗಿತ್ತು ಮತ್ತು ಕಾಂಪೋಸ್ಟಿಂಗ್ ಹಾಗೂ ವಿಕೇಂದ್ರೀಕೃತ ವ್ಯವಸ್ಥೆಗಳ ಮೂಲಕ ನಿರ್ವಹಿಸುವುದು ಸುಲಭವಾಗಿತ್ತು.
ಆದರೆ, ಬದಲಾಗುತ್ತಿರುವ ಬಳಕೆಯ ಪದ್ಧತಿಗಳು ಹಾಗೂ ಪ್ಲಾಸ್ಟಿಕ್ ಮತ್ತು ಸಂಯೋಜಿತ ವಸ್ತುಗಳ ಅತಿಯಾದ ಬಳಕೆಯು ತ್ಯಾಜ್ಯ ನಿರ್ವಹಣೆಯನ್ನು ಇಂದು ಅತ್ಯಂತ ಸಂಕೀರ್ಣಗೊಳಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಾವು ಅನೇಕ ಬಾರಿ ಪರಿಹಾರಕ್ಕಾಗಿ ತಂತ್ರಜ್ಞಾನದತ್ತ ಮುಖ ಮಾಡುತ್ತೇವೆ, ಆದರೆ ತ್ಯಾಜ್ಯ ನಿರ್ವಹಣೆಯಲ್ಲಿ ಮಾನವನ ಸರಿಯಾದ ನಡವಳಿಕೆಯೇ ಅತ್ಯಂತ ವಿಶ್ವಾಸಾರ್ಹ ಮತ್ತು ಕೈಗೆಟುಕುವ ಪರಿಹಾರವಾಗಿದೆ. ಈ ವಿಷಯದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಸ್ವಯಂಚಾಲಿತ ವಿಂಗಡಣಾ ವ್ಯವಸ್ಥೆಗಳ ಪಾತ್ರವನ್ನು ಅತಿಯಾಗಿ ಅಂದಾಜು ಮಾಡಬಾರದು ಎಂದು ಎಚ್ಚರಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರೊಫೆಸರ್ ಜಿ. ಎಲ್. ಶಿವಕುಮಾರ್ ಬಾಬು ಮಾತನಾಡಿ, ಹಳೆಯ ಲ್ಯಾಂಡ್‌ಫಿಲ್‌ಗಳಿಂದ ಉಂಟಾಗುತ್ತಿರುವ ಪರಿಸರ ಮತ್ತು ಆರ್ಥಿಕ ನಷ್ಟಗಳನ್ನು ತಿಳಿಸಿದರು. ಇವುಗಳಿಂದ ಹೊರಹೊಮ್ಮುವ ಮಿಥೇನ್ ಅನಿಲ, ಅಂತರ್ಜಲ ಮಾಲಿನ್ಯ ಮತ್ತು ಭೂಮಿಯ ಸಾರಹೀನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಈ ತಾಣಗಳು ಕೇವಲ ಪರಿಸರದ ಸಮಸ್ಯೆಯಲ್ಲ, ಬದಲಿಗೆ ದೀರ್ಘಕಾಲದ ಹೊಣೆಗಾರಿಕೆಯಾಗಿವೆ ಎಂದ ಹೇಳಿದ ಅವರು, ಕೇವಲ ಮಾಲಿನ್ಯ ತಡೆಗಟ್ಟುವಿಕೆಯನ್ನು ನಂಬಿ ಕೂರುವ ಬದಲು, ವಿಕೇಂದ್ರೀಕೃತ ಸಂಸ್ಕರಣೆ ಮತ್ತು ಮರುಬಳಕೆಯ ಮೂಲಕ ಲ್ಯಾಂಡ್‌ಫಿಲ್‌ಗಳಿಗೆ ತಲುಪುವ ಕಸದ ಪ್ರಮಾಣವನ್ನು ಕಡಿಮೆ ಮಾಡುವುದೇ ಹೆಚ್ಚು ಸುಸ್ಥಿರವಾದ ಮಾರ್ಗ ಎಂದು ವಾದಿಸಿದರು.
ತ್ಯಾಜ್ಯ ನಿರ್ವಹಣೆಯ ಸಾಮಾಜಿಕ ಆಯಾಮಗಳ ಬಗ್ಗೆ ಗಮನ ಸೆಳೆದ ‘ಹಸಿರು ದಳ ಇನ್ನೋವೇಶನ್ಸ್’ನ ಸಿಇಒ ಶೇಖರ್ ಪ್ರಭಾಕರ್ ಅವರು, ಬೆಂಗಳೂರಿನ ಹೆಚ್ಚಿನ ಮರುಬಳಕೆ ದರಕ್ಕೆ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಕಸ ಆಯುವವರು ಮತ್ತು ಅಸಂಘಟಿತ ವಲಯದ ಕಾರ್ಮಿಕರೇ ಮುಖ್ಯ ಕಾರಣ ಎಂದು ತಿಳಿಸಿದರು.
ಕಸಗಳ ಮರುಬಳಕೆಯ ಯಶಸ್ಸು ಮನುಷ್ಯರ ಮೇಲೆ ನಿರ್ಮಿತವಾಗಿದೆಯೇ ಹೊರತು ಯಂತ್ರಗಳ ಮೇಲಲ್ಲ. ನಗರಗಳು ಸ್ವಚ್ಛ ಮತ್ತು ಹೆಚ್ಚು ಔಪಚಾರಿಕ ವ್ಯವಸ್ಥೆಗಳತ್ತ ಸಾಗುತ್ತಿರುವಾಗ, ಹೊಸ ಮಾದರಿಗಳಲ್ಲಿ ಒಳಗೊಳ್ಳುವಿಕೆಯನ್ನು ಪ್ರಜ್ಞಾಪೂರ್ವಕವಾಗಿ ರೂಪಿಸದಿದ್ದರೆ ಕಸ ಸಂಗ್ರಹ ಮಾಡುವ ಕಾರ್ಮಿಕರು ಈ ವ್ಯವಸ್ಥೆಯಿಂದ ಹೊರಗುಳಿಯುವ ಅಪಾಯವಿದೆ.
ಸಮುದಾಯ ಮಟ್ಟದ ಅನುಷ್ಠಾನದ ದೃಷ್ಟಿಕೋನದಿಂದ ಮಾತನಾಡಿದ ‘ಸಹಜ’ ಸಂಸ್ಥೆಯ ಸಿಇಒ ಅರ್ಚನಾ ತ್ರಿಪಾಠಿ ನಾಗರಿಕರು ಕಸವನ್ನು ವಿಂಗಡಿಸಲು ಏಕೆ ಸಿದ್ಧರಿಲ್ಲ ಎಂದು ಪ್ರಶ್ನಿಸಿದರು. ವ್ಯವಸ್ಥೆಗಳು ಸ್ಥಿರ ಮತ್ತು ಪಾರದರ್ಶಕವಾಗಿದ್ದಾಗ ಹೆಚ್ಚಿನ ನಿವಾಸಿಗಳು ನಿಯಮಗಳನ್ನು ಪಾಲಿಸಲು ಸಿದ್ಧರಿರುತ್ತಾರೆ ಎಂದು ಹೇಳಿದರು.
ವಿಂಗಡಿಸಿದ ಕಸವನ್ನು ಸಂಗ್ರಹಣೆಯ ಸಮಯದಲ್ಲಿ ಮತ್ತೆ ಒಟ್ಟಿಗೆ ಬೆರೆಸಿದಾಗ ಸಮಸ್ಯೆ ಶುರುವಾಗುತ್ತದೆ. ಇಂತಹ ಪದ್ಧತಿಗಳು ನಾಗರಿಕರ ವಿಶ್ವಾಸ ಮತ್ತು ಆಸಕ್ತಿಯನ್ನು ವೇಗವಾಗಿ ಕುಂದಿಸುತ್ತವೆ ಎಂದರು.
ಘನತ್ಯಾಜ್ಯ ನಿರ್ವಹಣಾ ರೌಂಡ್ ಟೇಬಲ್ ಬೆಂಗಳೂರು ಟ್ರಸ್ಟಿ ಹಾಗೂ ಎಂಡ್‌ಲೆಸ್ಲಿ ಗ್ರೀನ್ ಸಂಸ್ಥಾಪಕಿ ಸವಿತಾ ಹಿರೇಮಠ್ ನಾಗರಿಕರ ಹೊಣೆಗಾರಿಕೆ ಮತ್ತು ನಿಯಮಗಳ ಜಾರಿಯಲ್ಲಿನ ಲೋಪಗಳ ಬಗ್ಗೆ ಮಾತನಾಡಿದರು.
ಬೆಂಗಳೂರಿನ ತ್ಯಾಜ್ಯ ನಿರ್ವಹಣಾ ಉಪನಿಯಮಗಳು ಕಾಗದದ ಮೇಲೆ ಸದೃಢವಾಗಿದ್ದರೂ, ಅವುಗಳ ಅಸಮರ್ಪಕ ಜಾರಿ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯು ಅವುಗಳ ಪ್ರಭಾವವನ್ನು ಕುಗ್ಗಿಸಿದೆ ಎಂದು ಹೇಳಿದರು.
ತ್ಯಾಜ್ಯ ನಿರ್ವಹಣೆಯನ್ನು ಸಂಪೂರ್ಣವಾಗಿ ನಾಗರಿಕ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡಲು ಸಾಧ್ಯವಿಲ್ಲ. ನಾಗರಿಕರು ಕೇವಲ ಕಸ ವಿಂಗಡಣೆಗೆ ಮಾತ್ರವಲ್ಲದೆ, ಕಸ ಉತ್ಪಾದನೆಯನ್ನು ಕಡಿಮೆ ಮಾಡುವಲ್ಲಿಯೂ ಜವಾಬ್ದಾರಿಯನ್ನು ಹೊರಬೇಕು ಎಂದು ಒತ್ತಿ ಹೇಳಿದರು.

