HomeKarnatakaಬಳ್ಳಾರಿಯಲ್ಲಿ ಬಿಜೆಪಿ ಸಮಾವೇಶಕ್ಕೆ ಅನುಮತಿ ನಿರಾಕರಣೆ: ಸರ್ಕಾರದ ವಿರುದ್ಧ ಕೇಸರಿ ನಾಯಕರ ಆಕ್ರೋಶ

ಬಳ್ಳಾರಿಯಲ್ಲಿ ಬಿಜೆಪಿ ಸಮಾವೇಶಕ್ಕೆ ಅನುಮತಿ ನಿರಾಕರಣೆ: ಸರ್ಕಾರದ ವಿರುದ್ಧ ಕೇಸರಿ ನಾಯಕರ ಆಕ್ರೋಶ

ಬಳ್ಳಾರಿ: ಬಳ್ಳಾರಿ ಚಲೋ ಬಿಜೆಪಿ ಪಾದಯಾತ್ರೆ ಇಂದು ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನೆರಡು ದಿನಗಳಲ್ಲಿ ಪಾದಯಾತ್ರೆ ಮುಕ್ತಾಯಗೊಳ್ಳಲಿದ್ದು, ಬೃಹತ್ ಸಮಾವೇಶಕ್ಕೆ ಬಿಜೆಪಿ ಸಜ್ಜಾಗಿದೆ. ಆದರೆ ರಾಜ್ಯ ಸರ್ಕಾರ ಬಿಜೆಪಿ ಸಮಾವೇಶಕ್ಕೆ ಬಿಗ್ ಶಾಕ್ ನೀಡಿದೆ.

ಬಳ್ಳಾರಿಯಲ್ಲಿ ಬಿಜೆಪಿ ಪಾದಯಾತ್ರೆಯ ಸಮಾರೋಪ ಸಮಾರಂಭಕ್ಕೆ ಬಳ್ಳಾರಿಯ ಎಕ್ಸ್ ಮುನಿಸಿಪಲ್ ಶಾಲಾ ಮೈದಾನವನ್ನು ಬಳಸಲು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ. ಬಳ್ಳಾರಿಯ ಎಕ್ಸ್ ಮುನಿಸಿಪಲ್ ಶಾಲಾ ಮೈದಾನದಲ್ಲಿ ಸೆಪ್ಟೆಂಬರ್ 10 ರಂದು ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಯವರೆಗೆ ಸಮಾರೋಪ ಸಮಾವೇಶ ನಡೆಸಲು ಅನುಮತಿ ಕೋರಿ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದ್ದರು. ಆದರೆ ಶಾಲಾ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯು ಮೈದಾನ ನೀಡಲು ನಿರಾಕರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರಣ ಸರ್ಕಾರಿ ಶಾಲಾ-ಕಾಲೇಜುಗಳ ಆವರಣ ಹಾಗೂ ಮೈದಾನಗಳನ್ನು ಖಾಸಗಿ ಸಂಸ್ಥೆಗಳು, ಸಂಘಟನೆಗಳ ಕಾರ್ಯಕ್ರಮಗಳಿಗೆ ನೀಡಬಾರದು ಎಂಬ ಸರ್ಕಾರದ ಕಡ್ಡಾಯ ಆದೇಶವನ್ನು ಮುಂದಿಟ್ಟು ಅನುಮತಿ ನಿರಾಕರಿಸಲಾಗಿದೆ.

ಇದರಿಂದಾಗಿ ಬಿಜೆಪಿ ನಾಯಕರು ಸಮಾವೇಶಕ್ಕೆ ಬೇರೆ ಸ್ಥಳಗಳನ್ನು ನೋಡಬೇಕಾದ ಸ್ಥಿತಿ ಎದುರಾಗಿದೆ. ಸರ್ಕಾರಿ ಆಸ್ತಿಗಳಾದ ಶಾಲೆ, ಪಿಯು ಕಾಲೇಜುಗಳ ಮೈದಾನ, ಉದ್ಯಾನವನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯವೆಂದು ಕಳೆದ ವರ್ಷದ ಅಕ್ಟೋಬರ್‌ 18 ರಂದು ಸಚಿವ ಸಂಪುಟವು ನಿರ್ಧರಿಸಿ ಮಾರ್ಗಸೂಚಿ ಹೊರಡಿಸಿತ್ತು.

ಸಾರ್ವಜನಿಕ ಸ್ಥಳಗಳ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕಳೆದ ಮುಂಗಾರು ಅಧಿವೇಶನದಲ್ಲಿ ‘ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ಮಸೂದೆ-2026’ ಅನ್ನು ಮಂಡಿಸಲು ಮುಂದಾಗಿತ್ತು. ಆದರೆ ವಿರೋಧ ಪಕ್ಷಗಳ ಧರಣಿಯಿಂದಾಗಿ ಅದು ಚರ್ಚೆಗೆ ಬರಲಿಲ್ಲ.

ಇನ್ನೊಂದೆಡೆ, ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈ ಹಿಂದೆ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ವಿಚಾರಣೆ ನಡೆಸುತ್ತಿದೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ಇಂದು ಸಂಡೂರಿನಿಂದ ಬಳ್ಳಾರಿ ತಲುಪಲಿದೆ. ಸಮಾವೇಶಕ್ಕೆ ಶಾಲಾ ಮೈದಾನದಲ್ಲಿ ಅನುಮತಿ ನಿರಾಕರಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ಸರ್ಕಾರ ದುರುದ್ದೇಶದಿಂದ ನಮಗೆ ಅನುಮತಿ ನಿರಾಕರಿಸುತ್ತಿದೆ. ಜಿಲ್ಲಾಧಿಕಾರಿಗಳು ಸರ್ಕಾರದ ಏಜೆಂಟ್ ರೀತತಿ ಕೆಲಸ ಮಾಡುತ್ತಿದ್ದಾರೆ. ಶಾಲಾ ಮೈದಾನದಲ್ಲಿ ಸಮಾವೇಶಕ್ಕೆ ಅನುಮತಿ ನೀಡದ ಮಾತ್ರಕ್ಕೆ ಸಮಾವೇಶ ನಿಲ್ಲುವುದಿಲ್ಲ. ಬೇರೆ ಸ್ಥಳಗಳಲ್ಲ್ ಸಮಾವೇಶ ನಡೆಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಈ ವೇಳೆ ಮಾತನಾಡಿದ ಬಿಜೆಪಿ ಶಸಾಕ ಅಶ್ವತ್ಥನಾರಾಯಣ, ಬಿಜೆಪಿ ಪಾದಯಾತ್ರೆಯಿಂದ ಸರ್ಕಾರಕ್ಕೆ ನಡುಕ ಶುರುವಾಗಿದೆ. ಹಾಗಾಗಿ ನಮ್ಮ ಪಾದಯಾತ್ರೆ ನಿಲ್ಲಿಸಲು ಯತ್ನಿಸುತ್ತಿದ್ದಾರೆ. ಸಮಾವೇಶ ನಡೆಸಲು ಅನುಮತಿ ನೀಡುತ್ತಿಲ್ಲ. ಇದೆಲ್ಲವೂ ರಾಜಕೀಯ ಷಡ್ಯಂತ್ರ. ಈ ಹಿಂದೆ ಇದೇ ಮೈದಾನದಲ್ಲಿ ರಾಜಕೀಯ ಸಮಾವೇಶಗಳು ನಡೆದಿದ್ದವು ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular