ಬೆಳಗಾವಿ: ಹೊಸ ಟ್ರ್ಯಾಕ್ಟರ್ ಖರೀದಿ ಮಾಡಿ ಮನೆಗೆ ಬರುತ್ತಿದ್ದ ವ್ಯಕ್ತಿಯೊಬ್ಬರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಬಳಿ ನಡೆದಿದೆ.
ಹೊಸ ಟ್ರ್ಯಾಕ್ಟರ್ ಖರೀದಿಸಿ ಮನೆಗೆ ಬರುತ್ತಿದ್ದಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್ ಓಡಿಸುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುಧಾಕರ ರಾವಸಾಹೇಬ ಕೊಂಡೆಕರ (47) ಮೃತ ದುರ್ದೈವಿ. ಕೊಲ್ಲಾಪೂರ ಜಿಲ್ಲೆಯ ಕಾಗಲ್ ನಿಂದ ಹೊಸ ಟ್ರ್ಯಾಕ್ಟರ್ ಖರಿದಿ ಮಾಡಿ ಚಿಕ್ಕೋಡಿ ತಾಲೂಕಿನ ಗಳತಗಾ ಗ್ರಾಮಕ್ಕೆ ಹಿಂತಿರಗುವಾಗ ಕಾರದಗಾ-ಭೋಜಕ್ರಾಸ್ ರಸ್ತೆಯಲ್ಲಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ರಸ್ತೆಯ ತಗ್ಗಿನಲ್ಲಿ ಉರುಳಿ ಬಿದ್ದಿದೆ. ಸ್ಥಳದಲ್ಲೇ ಸುಧಾಕರ ರಾವಸಾಹೇಬ ಮೃತಪಟ್ಟಿದ್ದಾರೆ.
ಟ್ರ್ಯಾಕ್ಟರ್ ಮಾಲೀಕ ಅಣ್ಣಾಸಾಬ ಚೌಗುಲೆ ಗಾಯಗೊಂಡಿದ್ದಾರೆ. ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

