ಬೆಳಗಾವಿ: ಮನೆಗೆ ಕುಡಿಯುವ ನೀರು ಸ್ಥಗಿತಗೊಳಿಸಿದ್ದಕ್ಕೆ ಬೇಸತ್ತು ದಂಪತಿ ತಮಗೆ ದಯಾಮರಣ ನೀಡುವಂತೆ ಕೋರಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಪಟ್ಟಣ ಪಂಚಾಯತ್ ಅಧಿಕಾರಿಗಳು ಮನೆಗೆ ನೀರು ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿ, ದಯಾಮರಣ ಕೋರಿ ತಹಶೀಲ್ದಾರ್ ಕಚೇರಿಗೆ ದಂಪತಿ ಅರ್ಜಿ ಸಲ್ಲಿಸಿದ್ದಾರೆ. ಬೆಳಗಾವಿಯ ಚನ್ನಮ್ಮ ಕಿತ್ತೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕಿತ್ತೂರು ಪಟ್ಟಣದ ಗುರುವಾರ ಪೇಟೆಯ ನಿವಾಸಿಗಳಾದ ಮಂಜುನಾಥ ಸವದಿ ಹಾಗೂ ಶೃತಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ದಂಪತಿ.
ಇಲ್ಲಿನ ಪಟ್ಟಣ ಪಂಚಾಯತ್ ಸಿಬ್ಬಂದಿ ನಮ್ಮ ನಲ್ಲಿಯಲ್ಲಿ ಬರುತ್ತಿದ್ದ ಕುಡಿಯುವ ನೀರನ್ನು ಬಂದ್ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಮ್ಮ ಮನೆಯಲ್ಲಿ ನೀರಿಲ್ಲ. ಹೀಗಾದರೆ ನಾವು ಜೀವನ ಮಾಡುವುದಾದರೂ ಹೇಗೆ?. ನಲ್ಲಿಯ ಬಾಕಿ ಬಿಲ್ ಪಾವತಿ ಮಾಡಿದ್ದೇವೆ. ಕೌಟುಂಬಿಕ ಜಗಳದಲ್ಲಿ ಪಟ್ಟಣ ಪಂಚಾಯತ್ ಸಿಬ್ಬಂದಿ ಮಧ್ಯಪ್ರವೇಶಿಸಿ ನೀರು ಸ್ಥಗಿತಗೊಳಿಸಿದ್ದಾರೆ ಎಂದು ಶೃತಿ ಸವದಿ ಆರೋಪಿಸಿದರು.
ವೈಯಕ್ತಿಕ ಜಗಳದಲ್ಲಿ ಕುಡಿಯುವ ನೀರಿನ ಸಂಪರ್ಕ ಬಂದ್ ಮಾಡುವುದು ಎಷ್ಟರ ಮಟ್ಟಿಗೆ ಸರಿ?. ಮೊನ್ನೆ ವಿದ್ಯುತ್ ಸಂಪರ್ಕ ಕೂಡ ಕಟ್ ಮಾಡಿದ್ದರು. ನಮ್ಮ ಸಂಬಂಧಿಕರು ಸೇರಿ ಎಲ್ಲರ ಕಿರುಕುಳದಿಂದ ನಮ್ಮ ಕುಟುಂಬಕ್ಕೂ ಬೇಸರವಾಗಿದೆ. ಬದುಕುವ ಆಸೆಯೇ ಕಮರಿಹೋಗಿದೆ. ಕಾರಣ ನಮಗೆ ದಯಾಮರಣ ಕರುಣಿಸಬೇಕು. ಜುಲೈ 6ರಂದು ಪಟ್ಟಣ ಪಂಚಾಯತ್ ಮುಂದೆ ನಮಗೆ ದಯಾಮರಣ ಕರುಣಿಸಿ ಎಂದು ದಂಪತಿ ಕೋರಿದ್ದಾರೆ. ಗ್ರೇಡ್-2 ತಹಶೀಲ್ದಾರ್ ಮೂಲಕ ತಹಶೀಲ್ದಾರ್ ಕಲಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ.

