ಬೆಳಗಾವಿ: ನವರಾತ್ರಿ ದಸರಾ ಹಬ್ಬದ ದಿನದಂದೇ ಭೀಕರ ಅಪಘಾತವೊಂದು ಸಂಭವಿಸಿದೆ. ದುರ್ಗಾಮಾತಾ ದೌಡ ದೇವಿ ಮೂರ್ತಿಯ ಮೆರವಣಿಗೆ ವೇಳೆ ಟ್ರಕ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಏಳು ಜನರ ಸ್ಥಿತಿ ಚಿಂತಾಜನಕವಾಗಿದೆ. ಹುಕ್ಕೇರಿ ತಾಲೂಕಿನ ಮಣಗುತ್ತಿ ಹಾಗೂ ಹತ್ತರಗಿ ಟೋಲ್‌ಗೇಟ್ ಸಮೀಪ ಈ ದುರ್ಘಟನೆ ನಡೆದಿದೆ.
ಹುಂಚ್ಯಾನಟ್ಟಿ ಗ್ರಾಮದಿಂದ ಬೆಳಗಾವಿಗೆ ತರಲಾಗಿದ್ದ ದುರ್ಗಾಮಾತಾ ದೌಡ ದೇವಿ ಮೂರ್ತಿಯನ್ನು ಮತ್ತೆ ಹುಂಚ್ಯಾನಟ್ಟಿ ಗ್ರಾಮಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಟ್ರಕ್ ಮೆರವಣಿಗೆಯಲ್ಲಿದ್ದವರ ಮೇಲೆ ಹರಿದಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಪ್ರಕಾಶ, ಮಹೇಶ್ ಹಾಗೂ ದಾನೇಶ್ವರಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಬೆಳಗಾವಿ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬೆಳೆ ಸರ್ವೆಗೆಂದು ಬಂದ ವಿಮಾ ಕಂಪನಿ ಸಿಬ್ಬಂದಿಯಿಂದ ಅಮಾನೀಯ ಕೃತ್ಯ: ಗ್ರಾಮ ಪಂಚಾಯಿತಿ ಸದಸ್ಯರ ಪ್ಯಾಂಟ್ ಬಿಚ್ಚಿಸಿ ಸರ್ವೆ; ಸ್ಥಳೀಯರ ಆಕ್ರೋಶ
ಹಾವೇರಿ: ವಿಮಾ ಕಂಪನಿಯ ಸಿಬ್ಬಂದಿಗಳು ಸರ್ವೆ ಕಾರ್ಯಕ್ಕೆ ಬಂದು ಗ್ರಾಅಮ ಪಂಚಾಯಿತಿ ಸಿಬ್ಬಂದಿಗಳ ಜೊತೆ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ಸರ್ವೆಗೆ ಬಂದಿದ್ದ ವಿಮಾ ಕಂಪನಿ ಸಿಬ್ಬಂದಿ ಗ್ರಾಮ ಪಂಚಾಯತಿ ಸಿಬ್ಬಂದಿಯ ಪ್ಯಾಂಟ್ ಬಿಚ್ಚಿಸಿ ಸರ್ವೆ ಮಾಡಿಸಿ ಅವಮಾನಿಸಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯರ ಜೊತೆ ವಿಮಾ ಕಂಪನಿ ಸಿಬ್ಬಂದಿಯ ಅಮಾನವೀಯ ಕೃತ್ಯಕ್ಕೆ ಗ್ರಾಮಸ್ಥರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಿಮಾ ಕಂಪನಿ ಸಿಬ್ಬಂದಿಗಳು ಗ್ರಾಮ ಪಂಚಾಯತಿ ಕಾರ್ಯದರ್ಶಿ ಪಕ್ಕೀರಪ್ಪ ಯತ್ನಳ್ಳಿ ಪ್ಯಾಂಟ್ ಬಿಚ್ಚಿಸಿ ಸರ್ವೆ ಮಾಡಿಸಿದ್ದಾರೆ. ಜಮೀನಿನಲ್ಲಿ ನೀರು ತುಂಬಿದ್ದರಿಂದ, ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ಆದರೂ, ಗ್ರಾಮ ಪಂಚಾಯತಿ ಸಿಬ್ಬಂದಿಯ ಪ್ಯಾಂಟ್ ಬಿಚ್ಚಿಸಿ ಸರ್ವೆ ಮಾಡಿಸಿ ಅವಮಾನಿಸಲಾಗಿದೆ. ನಿಯಮಗಳನ್ನು ಪಾಲಿಸದೆ, ಮನಬಂದಂತೆ ಸರ್ವೆ ನಡೆಸಿದ ವಿಮಾ ಕಂಪನಿ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

