HomeLatest NewsBDAಯಿಂದ ಹೊಸ ಮಾರ್ಗಸೂಚಿ: OC ಬಳಿಕ ಕಟ್ಟಡ ಪ್ಲಾನ್ ಬದಲಾವಣೆ ನಿಷೇಧ: ಅಪಾರ್ಟ್‌ಮೆಂಟ್‌ಗಳಿಗೆ 15 ಪ್ರಮುಖ...

BDAಯಿಂದ ಹೊಸ ಮಾರ್ಗಸೂಚಿ: OC ಬಳಿಕ ಕಟ್ಟಡ ಪ್ಲಾನ್ ಬದಲಾವಣೆ ನಿಷೇಧ: ಅಪಾರ್ಟ್‌ಮೆಂಟ್‌ಗಳಿಗೆ 15 ಪ್ರಮುಖ ನಿಯಮಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಫ್ಲ್ಯಾಟ್ ಖರೀದಿದಾರರಿಗೆ ಬಿಡಿಎ ಅತ್ಯಂತ ಮಹತ್ವದ ಸಿಹಿ ಸುದ್ದಿ ನೀಡಿದೆ. ಸ್ವಾಧೀನಾನುಭವ ಪತ್ರ (OC) ನೀಡಿದ ನಂತರವೂ ಬಿಲ್ಡರ್‌ಗಳು ತಮ್ಮ ಮನಸೋ ಇಚ್ಛೆ ಪರಿಷ್ಕೃತ ಕಟ್ಟಡ ನಕ್ಷೆ ಅನುಮೋದನೆ ಪಡೆದು ಹೆಚ್ಚುವರಿ ಕಾಮಗಾರಿ ನಡೆಸುವುದು ಅಥವಾ ನಕ್ಷೆ ಬದಲಾಯಿಸುವುದಕ್ಕೆ ಬಿಡಿಎ ಈಗ ಕಟ್ಟುನಿಟ್ಟಿನ ಬ್ರೇಕ್ ಹಾಕಿದೆ.

ಎಚ್‌.ಎಂ.ಟಾಂಬೋರಿಯನ್‌ ಅಪಾರ್ಟ್‌ಮೆಂಟ್‌ ಓನರ್ಸ್ ಅಸೋಸಿಯೇಷನ್ ಮತ್ತು ಬಿಡಿಎ ನಡುವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ವಿಭಾಗೀಯ ಪೀಠ ಕಳೆದ ಜೂನ್ 23ರಂದು ನೀಡಿದ್ದ ಮಧ್ಯಂತರ ಆದೇಶದ ಅನ್ವಯ, ಬಿಡಿಎ ಈಗ 15 ಸ್ಪಷ್ಟ ಹಾಗೂ ಕಡ್ಡಾಯ ಅಂಶಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಇದುವರೆಗೆ ಒಸಿ ನೀಡಿದ ನಂತರ ಕಟ್ಟಡ ನಕ್ಷೆ ಪರಿಷ್ಕರಿಸಲು ನಿರ್ದಿಷ್ಟ ನಿಯಮಗಳಿಲ್ಲದೆ ಉಂಟಾಗಿದ್ದ ಗೊಂದಲ ಮತ್ತು ಬಿಲ್ಡರ್‌ಗಳ ಅಕ್ರಮಗಳಿಗೆ ಈ ನೂತನ ಸುತ್ತೋಲೆಯು ಸಂಪೂರ್ಣ ತೆರೆ ಎಳೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಡಿಎ ಹೊರಡಿಸಿರುವ 15 ಪ್ರಮುಖ ಮಾರ್ಗಸೂಚಿಗಳು ಇಲ್ಲಿವೆ:

ಸಂಪೂರ್ಣ ಎಫ್‌ಎಆರ್ ಬಳಕೆಯಾಗಿದ್ದರೆ ಪರಿಷ್ಕರಣೆ ಇಲ್ಲ: ಅನುಮತಿಸಲಾದ ಎಫ್‌ಎಆರ್ ಅನ್ನು ಸಂಪೂರ್ಣವಾಗಿ ಬಳಸಿಕೊಂಡು ಈಗಾಗಲೇ ‘ಒಸಿ’ ಪಡೆದಿದ್ದರೆ, ಅಂತಹ ಕಟ್ಟಡಗಳಿಗೆ ಯಾವುದೇ ಕಾರಣಕ್ಕೂ ಪರಿಷ್ಕೃತ ನಕ್ಷೆ ಮಂಜೂರು ಮಾಡುವಂತಿಲ್ಲ.

ನಿವೇಶನ ಜಾಗ ಬದಲಾವಣೆಗೆ ತಡೆ: ಭಾಗಶಃ ಒಸಿ ನೀಡಲಾಗಿದ್ದು, ಎಫ್‌ಎಆರ್ ಬಾಕಿ ಇದ್ದರೂ ಪರಿಷ್ಕೃತ ಪ್ಲಾನ್ ಕೋರಿದಾಗ ಮೂಲ ನಕ್ಷೆಯಲ್ಲಿದ್ದ ನಿವೇಶನದ ವಿಸ್ತೀರ್ಣವನ್ನು ಬದಲಾಯಿಸುವಂತಿಲ್ಲ.

ಸಾರ್ವಜನಿಕ/ಸಾಮಾನ್ಯ ಸ್ಥಳಗಳಿಗೆ ರಕ್ಷಣೆ: ಅಪಾರ್ಟ್‌ಮೆಂಟ್‌ನಲ್ಲಿ ಮೀಸಲಿಟ್ಟ ಉದ್ಯಾನವನ, ತೆರೆದ ಜಾಗ ಮತ್ತು ಇತರೆ ಸೌಲಭ್ಯಗಳ ಜಾಗವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವಂತಿಲ್ಲ.

2/3ನೇ ಭಾಗದ ಖರೀದಿದಾರರ ಒಪ್ಪಿಗೆ ಕಡ್ಡಾಯ: ಒಸಿ ಸಿಗದ ಅಥವಾ ಬಾಕಿ ಎಫ್‌ಎಆರ್ ಇದ್ದು, ಈಗಾಗಲೇ ಮೂರನೇ ವ್ಯಕ್ತಿಗಳ (ಖರೀದಿದಾರರ) ಹಕ್ಕುಗಳು ಸೃಷ್ಟಿಯಾಗಿದ್ದರೆ, ಪ್ಲಾನ್ ಬದಲಾಯಿಸಲು 2/3ರಷ್ಟು ಫ್ಲ್ಯಾಟ್ ಖರೀದಿದಾರರ ಸಮ್ಮತಿ ಕಡ್ಡಾಯ.

ಮಾರಾಟ ಪತ್ರದಲ್ಲಿ ಷರತ್ತು: ಭವಿಷ್ಯದಲ್ಲಿ ಲಭ್ಯವಾಗುವ ಬಾಕಿ ಎಫ್‌ಎಆರ್/ಟಿಡಿಆರ್/ಪ್ರೀಮಿಯಂ ಎಫ್‌ಎಆರ್ ಬಳಸಿಕೊಳ್ಳುವುದಿದ್ದರೆ, ಅದನ್ನು ಸೇಲ್ ಡಿಡ್ ಅಥವಾ ಒಪ್ಪಂದದಲ್ಲೇ ಬಿಲ್ಡರ್ ಸ್ಪಷ್ಟವಾಗಿ ನಮೂದಿಸಿರಬೇಕು.

ಎನ್‌ಒಸಿ (NOC) ಕಡ್ಡಾಯ: ಮಾರಾಟ ಪತ್ರದಲ್ಲಿ ಉಲ್ಲೇಖವಿದ್ದು, ಸಂಬಂಧಿತ ಇಲಾಖೆಗಳಿಂದ ಎನ್‌ಒಸಿ ಪಡೆದಿದ್ದರೆ ಮಾತ್ರ ಬಾಕಿ ಎಫ್‌ಎಆರ್ ಬಳಸಲು ಅವಕಾಶ.

ಸಕ್ಷಮ ಪ್ರಾಧಿಕಾರಗಳ ಅನುಮತಿ: ಉದ್ದೇಶಿತ ಹೆಚ್ಚುವರಿ ನಿರ್ಮಾಣಗಳಿಗೆ ಅಗತ್ಯವಿರುವ ಎಲ್ಲಾ ಸಕ್ಷಮ ಪ್ರಾಧಿಕಾರಗಳ ಪೂರ್ವಾನುಮೋದನೆ ಪಡೆಯಬೇಕು.

ಯುಡಿಎಸ್ (UDS) ಬದಲಾಯಿಸುವಂತಿಲ್ಲ: ಹೆಚ್ಚುವರಿ ಎಫ್‌ಎಆರ್ ಬಳಸುವ ನೆಪದಲ್ಲಿ ಗ್ರಾಹಕರ ಅವಿಭಜಿತ ಭೂಮಿ ಪಾಲು ಪ್ರಮೇಯವನ್ನು ಬದಲಾಯಿಸಬಾರದು.

ವಲಯ ನಿಯಮಗಳ ಅನ್ವಯವಿಲ್ಲ: ಮೂಲ ಪ್ಲಾನ್ ಮಂಜೂರಾದ ಸಮಯದಲ್ಲಿದ್ದ ವಲಯ ನಿಯಮಗಳಷ್ಟೇ (Zonal Regulations) ಪರಿಷ್ಕರಣೆಗೂ ಅನ್ವಯಿಸುತ್ತದೆ.

ಹಕ್ಕು ಶಾಶ್ವತವಾಗಿ ರದ್ದು: ಇಡೀ ಯೋಜನೆಗೆ ಒಮ್ಮೆ ಪೂರ್ಣ ಒಸಿ ಸಿಕ್ಕ ನಂತರ, ಬಿಲ್ಡರ್ ಪ್ಲಾನ್ ಬದಲಾಯಿಸುವ ಶಾಶ್ವತ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಬಿಡಿಎ ಕೂಡ ಇಂತಹ ಅರ್ಜಿಗಳನ್ನು ಸ್ವೀಕರಿಸುವಂತಿಲ್ಲ.

ಖಾಲಿ ಜಾಗಗಳ ದುರ್ಬಳಕೆ ಬೇಡ: ಮೂಲ ಪ್ಲಾನ್‌ನಲ್ಲಿ ಭವಿಷ್ಯದ ಅಭಿವೃದ್ಧಿಗಾಗಿ ಕಾಯ್ದಿರಿಸದ ಯಾವುದೇ ಖಾಲಿ ಜಾಗವನ್ನು ಪರಿಷ್ಕೃತ ಪ್ಲಾನ್‌ಗೆ ಪರಿಗಣಿಸುವುದಿಲ್ಲ.

ವಿಭಾಗಗಳ ನಡುವೆ ಕಡ್ಡಾಯ ತಪಾಸಣೆ: ಪಟ್ಟಣ ಯೋಜನಾ ವಿಭಾಗ (TPM) ಮತ್ತು ಎಂಜಿನಿಯರಿಂಗ್ ವಿಭಾಗಗಳು (EM) ಯೋಜನೆಯ ಯಾವುದೇ ಭಾಗಕ್ಕೆ ಈಗಾಗಲೇ ಒಸಿ ಸಿಕ್ಕಿದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

ಏಕೀಕೃತ ತಂತ್ರಾಂಶ : ಸಂವಹನ ಕೊರತೆ ತಡೆಯಲು ಬಿಡಿಎ ತಂತ್ರಾಂಶದಲ್ಲೇ ಟಿಪಿಎಂ ಮತ್ತು ಇಎಮ್ ವಿಭಾಗಗಳ ಅನುಮೋದನೆಗಳ ಮಾಹಿತಿ ಲಭ್ಯವಿರಬೇಕು.

2027ರ ಏಪ್ರಿಲ್‌ನಿಂದ ಇಆರ್‌ಪಿ : ಈ ಪ್ರಕ್ರಿಯೆಗಾಗಿ ಇಆರ್‌ಪಿ ತಂತ್ರಾಂಶವನ್ನು 6 ತಿಂಗಳಲ್ಲಿ ಸಿದ್ಧಪಡಿಸಿ, 2027ರ ಏಪ್ರಿಲ್ 1ರಿಂದ ಪೂರ್ಣ ಜಾರಿಗೆ ತರಲಾಗುವುದು.

90 ದಿನಗಳ ಗಡುವು: ಅರ್ಜಿ ಸಲ್ಲಿಕೆಯಾದ 90 ದಿನಗಳ ಒಳಗಾಗಿ ಬಿಡಿಎ ಅಧಿಕಾರಿಗಳು ಅದನ್ನು ಅನುಮೋದಿಸಬೇಕು ಅಥವಾ ಸೂಕ್ತ ಕಾರಣ ನೀಡಿ ತಿರಸ್ಕರಿಸಬೇಕು.

ಸಾರ್ವಜನಿಕರಿಗೆ ಸಿಕ್ಕ ಜಯ:

ಬಿಡಿಎ ಅಧಿಕಾರಿಗಳು ತಮ್ಮ ಮನಸೋ ಇಚ್ಛೆ ಪರಿಷ್ಕೃತ ಕಟ್ಟಡ ನಕ್ಷೆಗಳಿಗೆ ಮಂಜೂರಾತಿ ನೀಡುವುದಕ್ಕೆ ಈ ನೂತನ ಮಾರ್ಗಸೂಚಿಯು ಪೂರ್ಣವಿರಾಮ ಇಟ್ಟಿದೆ. ಇದರಿಂದಾಗಿ ಅಪಾರ್ಟ್‌ಮೆಂಟ್ ಖರೀದಿಸಿದ ನಂತರ ಬಿಲ್ಡರ್‌ಗಳಿಂದ ಮೋಸಕ್ಕೊಳಗಾಗುತ್ತಿದ್ದ ಸಾವಿರಾರು ಗ್ರಾಹಕರಿಗೆ ದೊಡ್ಡ ಮಟ್ಟದ ಕಾನೂನು ರಕ್ಷಣೆ ಸಿಕ್ಕಂತಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular