ಬೆಂಗಳೂರು : ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಸಿ. ನಾಗೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ನಾಗೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿದ ಸಿಎಂ ಡಿ.ಕೆ. ಶಿವಕುಮಾರ್ ‘’ಮಾಜಿ ಸಚಿವರು ಹಾಗೂ ತಿಪಟೂರು ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕರು, ಸರಳ ಸಜ್ಜನ ರಾಜಕಾರಣಿ ಶ್ರೀ ಬಿ.ಸಿ ನಾಗೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಲಾಯಿತು. ಶ್ರೀ ಬಿ.ಸಿ ನಾಗೇಶ್ ಅವರು ಹಲವು ವರ್ಷಗಳಿಂದ ನನಗೆ ಪರಿಚಿತರು. ಶಿಕ್ಷಣ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದ ಒಬ್ಬ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತನ್ನು ತರಲು ದೊಡ್ಡ ಪ್ರಯತ್ನ ಮಾಡಿದ್ದರು. ಅವರಿಗೆ ಎಲ್ಲಾ ರೀತಿಯ ಸರ್ಕಾರಿ ಗೌರವಗಳನ್ನು ಒದಗಿಸುತ್ತೇವೆ. ನೊಣವಿನಕೆರೆ ಮಠದ ಎಲ್ಲಾ ಕಾರ್ಯಕ್ರಮಗಳಲ್ಲೂ ನನ್ನೊಂದಿಗೆ ಪಾಲ್ಗೊಂಡು, ನಮಗೆ ಸಹಕರಿಸಿದ್ದರು. ಈ ದುಃಖದ ಸಂದರ್ಭದಲ್ಲಿ ಕುಟುಂಬಸ್ಥರು ಯಾರೂ ಧೈರ್ಯವನ್ನು ಕಳೆದುಕೊಳ್ಳಬಾರದು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ, ಬಂಧುಗಳಿಗೆ, ಅನುಯಾಯಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’’ ಎಂದು ಟ್ವೀಟ್ ಮಾಡಿದ್ದಾರೆ.

