ಬೆಂಗಳೂರು: ವಿಧಾನ ಪರಿಷತ್ ಸಭಾಅಪತಿ ಬಸವರಾಜ್ ಹೊರಟ್ಟಿ ಅವರಿಗೆ ರಾಜೀನಾಮೆ ಒತ್ತಡ ಹೇರಲಾಗುತ್ತಿದೆ. ಅವಧಿ ಮುಗಿಯುವ ಮುನ್ನವೇ ಆಡಳಿತಾರೂಢ ಕಾಂಗ್ರೆಸ್ ನಾಯಕರಿಂದ ಈ ರೀತಿ ನಡೆದುಕೊಳ್ಳುತ್ತಿರುವುದರ ಬಗ್ಗೆ ಹೊರಟ್ಟಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಹೊರಟ್ಟಿ, ಇಂದು ಮಧ್ಯಾಹ್ನ 2ಗಂಟೆ ಸುಮಾರಿಗೆ ಮುಖ್ಯಮಂತ್ರಿಗಳು ಫೋನ್ ಮಾಡಿದ್ದರು. ಪಕ್ಷದ ಹೈಕಮಾಂಡ್ ಸೂಚಿಸಿದೆ, ದಯವಿಟ್ಟು ರಾಜೀನಾಮೆ ನೀಡಿ ಎಂದಿದ್ದಾರೆ. ಅವಧಿ ಮುಗಿಯುವ ಮುನ್ನವೇ ಯಾವ ಕಾರಣಕ್ಕೆ ರಾಜೀನಾಮೆ ಕೇಳುತ್ತಿದ್ದಾರೆ? ಅರ್ಥವಾಗುತ್ತಿಲ್ಲ ಎಂದರು.
ಇದು ಕಲುಷಿತ ರಾಜಕಾರಣ. ಮನಸ್ಸಿಗೆ ತುಂಬಾ ನೋವಾಗಿದೆ. ಇತಿಹಾಸದಲ್ಲೇ ಈ ರೀತಿ ಆಗಿರಲಿಲ್ಲ. ಪಕ್ಷದ ಲೆಟರ್ ಹೆಡ್ನಲ್ಲಿ ಎಂದೂ ಈ ರೀತಿ ಆಯ್ಕೆ ಆಗಿರಲಿಲ್ಲ. ಸಭಾಪತಿ, ಸಭಾಧ್ಯಕ್ಷರ ಸ್ಥಾನ ಸಾಂವಿಧಾನಿಕ ಹುದ್ದೆ. ನನಗೆ ನೋಟಿಸ್ ಕೊಡಲಿ ಉತ್ತರ ಕೊಡುತ್ತೇನೆ. ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕೆನೂ ಇಲ್ಲ. ಯಾವ ಕಾರಣಕ್ಕೆ ರಾಜೀನಾಮೆ ಕೇಳಿದರು ಎನ್ನುವುದು ಮುಖ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಸಿಎಂ ಡಿ.ಕೆ.ಶಿವಕುಮಾರ್ ಕರೆ ಮಾಡಿ ಪಕ್ಷದಿಂದ ಆಯ್ಕೆ ಪ್ರಕ್ರಿಯೆ ಆಗಿದೆ. ತಾವು ರಾಜೀನಾಮೆ ನೀಡಿ ಅಂದರು. ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ, ನಾನು ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಜೊತೆಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದರು.
ಈ ರೀತಿ ಆಗುತ್ತೆ ಅಂತಾ ನಿರೀಕ್ಷೆ ಇರಲಿಲ್ಲ. ಇದು ಸಭಾಪತಿ ಪೀಠಕ್ಕೆ ಅವಮಾನ ಮಾಡಿದಂತೆ. ನನ್ನ ಅವಧಿ ಇನ್ನೂ ಇದೆ. ಹೀಗಾಗಿ ಸದ್ಯಕ್ಕೆ ರಾಜೀನಾಮೆ ಕೊಡಲ್ಲ. ವಿಪಕ್ಷ ನಾಯಕರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

