HomeLatest NewsBIG NEWS: ತಮಾಷೆಗಾದರೂ ಗೃಹಸಚಿವ ಪರಮೇಶ್ವರ್ ಸತ್ಯ ಹೇಳಿದ್ದಾರೆ: ಸಂಸದ ಬೊಮ್ಮಾಯಿ ವ್ಯಂಗ್ಯ

BIG NEWS: ತಮಾಷೆಗಾದರೂ ಗೃಹಸಚಿವ ಪರಮೇಶ್ವರ್ ಸತ್ಯ ಹೇಳಿದ್ದಾರೆ: ಸಂಸದ ಬೊಮ್ಮಾಯಿ ವ್ಯಂಗ್ಯ

ಬೆಂಗಳೂರು: ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿ ದಿಕ್ಕು ದೆಸೆ ಇಲ್ಲದ ಸರ್ಕಾರ ರಾಜ್ಯದಲ್ಲಿ ನಡೆದಿದೆ‌. ಇದರಿಂದ ಜನ ಬೇಸತ್ತಿದ್ದಾರೆ‌. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹಣ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ ಅವರು ತಮಾಷೆಗಾಗಿಯಾದರೂ ಸತ್ಯ ಹೇಳಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಂಸದ ಬೊಮ್ಮಾಯಿ, ಗೃಹ ಸಚಿವ ಪರಮೇಶ್ವರ್ ಅವರು ಸಿಎಂ ಸಿದ್ದರಾಮಯ್ಯ ಅವರ ಬಳಿ ದುಡ್ಡು ಇಲ್ಲಾ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು. ಈಗ ತಮಾಷೆಗಾಗಿ ಹೇಳಿದ್ದೆ ಎಂದು ಹೇಳುತ್ತಿದ್ದಾರೆ. ತಮಾಷೆಗಾದರೂ ಸತ್ಯ ಹೇಳಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಶಾಸಕರಿಗೆ ಯಾವುದೇ ಅನುದಾನ ಇಲ್ಲ. ಕೆಲಸ ಮಾಡಲು ಆಗಿಲ್ಲ. ಹೀಗೆ ಆದರೆ, ಇನ್ನೆರಡುವರೆ ವರ್ಷದಲ್ಲಿ ಜನರ ಬಳಿ ಹೋಗಲು ಆಗುವುದಿಲ್ಲ. ಸರ್ಕಾರದ ಬಳಿ ಹಣ ಇಲ್ಲ. ಕೆಲಸ ಮಾಡಲು ಪ್ರತಿಯೊಂದಕ್ಕೂ ಭ್ರಷ್ಟಾಚಾರ ನಡೆಯುತ್ತಿದೆ. ಎಷ್ಟಿಮೇಟ್ ಗೂ ಭ್ರಷ್ಟಾಚಾರ, ವರ್ಕ್ ಆರ್ಡರ್ ತೆಗೆದುಕೊಳ್ಳಲು ಭ್ರಷ್ಟಾಚಾರ. ಕಾಂಗ್ರೆಸ್ ನ ನೀತಿಯಿಂದಾಗಿ ಜನರು ತಮ್ಮ ದುಡಿಮೆಯ ಹಣವನ್ನು ಭ್ರಷ್ಟಾಚಾರಕ್ಕೆ ಕೊಡುವ ಪರಿಸ್ಥಿತಿ ಬಂದಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಮಾರ್ಟ್ ಮೀಟರ್ ದರ 500-600 ಇದ್ದದ್ದು ಆರೇಳು ಸಾವಿರ ಮಾಡಿದ್ದಾರೆ. ಅದನ್ನು ಸರ್ಕಾರ ಕೊಡುವುದಿಲ್ಲ ಜನರಿಂದ ಕೊಡಿಸುತ್ತಾರೆ‌. ಜನ ಕೊಡುವ ದುಡ್ಡಿನಿಂದ ಭ್ರಷ್ಟಾಚಾರ ಮಾಡುತ್ತಿದ್ದಾರೆ. ರೈತರ ಹಾಲಿನ ಪ್ರೋತ್ಸಾಹ ಧನ 750 ಕೋಟಿ ರೂ. ಕೊಟ್ಟಿಲ್ಲ. ಹಾಲು ಉತ್ಪಾದಕ ಮಂಡಳಿಗಳಿಗೆ ಹಾಲಿನ ದರ ಏರಿಸಲು ಹೇಳಿದರು. ಅದನ್ನು ಜನರ ಮೇಲೆ ಹಾಕಿದರು. ಅಬಕಾರಿ ಇಲಾಖೆಯಲ್ಲಿ ಬಡವರು ಕುಡಿಯುವ ಸಾರಾಯಿ ಮೇಲೆ ಹೆಚ್ಚಿನ ತೆರಿಗೆ ಹಾಕಿದ್ದಾರೆ. ಅಬಕಾರಿ ಡೀಲರ್ಸ್ ಪ್ರತಿಭಟನೆ ಮಾಡಿದರು. ಪಿಡಬ್ಲ್ಯುಡಿ ಗುತ್ತಿಗೆದಾರರು, ವಿದ್ಯುತ್ ಗುತ್ತಿಗೆದಾರರು ಪ್ರತಿಭಟನೆ ಮಾಡಿದರು. ಆದರೂ ಸರ್ಕಾರದವರು ತುಟಿ ಪಿಟಕ್ ಅನ್ನಲಿಲ್ಲ. ವಿರೋಧ ಪಕ್ಷದಲ್ಲಿ ಇದ್ದಾಗ ಭ್ರಷ್ಟಾಚಾರದ ವಿರುದ್ದ ದೊಡ್ಡ ಹಂಗಾಮ ಮಾಡಿದ್ದರು. ಇಡೀ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ದಿಕ್ಕು ದೆಸೆ ಇಲ್ಲದೆ ನಡೆದಿದೆ‌ ಎಂದು ಕಿಡಿಕಾರಿದರು.

For Latest News Updates, Join Our Whatsapp Community🚩
RELATED ARTICLES

Most Popular