ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ವಿಚಾರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇದರಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುತ್ತಿದೆ. ಆಯ್ಕೆ ಹಿಂಪಡೆಯುವಂತೆ ಹಿಂದೂ ಜಾಗರಣಾ ವೇದಿಕೆ ಒತ್ತಾಯಿಸಿದೆ.
ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿ ನಡೆದುಕೊಳ್ಳುತ್ತಿರುವ ಲೇಖಕಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವುದು ಸರಿಯಲ್ಲ. ತಕ್ಷಣ ಸರ್ಕಾರ ಇವರ ಆಯ್ಕೆ ಹಿಂಪಡೆಯಬೇಕು ಎಂದು ಮೈಸೂರು ಜಿಲ್ಲಾ ಹಿಂದೂ ಜಾಗರಣ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
ದಸರಾ ನವರಾತ್ರಿಯ ೯ ದಿನಗಳ ಕಾಲ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸುವ ಹಿಂದೂ ಸಮಾಜ ಬಾನು ಮುಷ್ತಾಕ್ ಆಯ್ಕೆಯನ್ನು ವಿರೋಧಿಸುತ್ತದೆ. ಈ ಹಿಂದೆ ಬಾನು ಮುಷ್ತಾಕ್ ತಾಯಿ ಭುವನೇಶ್ವರಿ, ಅರಿಷಿಣ-ಕುಂಕುಮ, ಕನ್ನಡ ಭಾಷೆಯ, ನಾಡಿನ ಸಂಸ್ಕೃತಿಯ ಬಗ್ಗೆ ಸಂಕುಚಿತವಾಗಿ ಮಾತನಡಿದ್ದರು. ಇದರಿಂದ ಜನರ ಭಾವನೆಗೆ ಧಕ್ಕೆಯಾಗಿದೆ. ಅದೇರೀತಿ ದಸರಾ ಮಹೋತ್ಸವದಲ್ಲಿಯೂ ಮಾತನಾಡುವ ಸಾಧ್ಯತೆ ಇದೆ. ಮೂರ್ತಿ ಆರಾಧನೆ ವಿರೋಧಿಸುವವರು, ಬಹು ವಿಗ್ರಹ ಆರಾಧನೆ ಮಾಡುವವರನ್ನು ನಿಂದಿಸುವವರು ಇಸ್ಲಾಂನಲ್ಲಿ ಅನೇಕರಿದ್ದಾರೆ. ದೇಶದ ಬಹುಸಂಖ್ಯಾತ ಹಿಂದುಗಳ ಭಾವನೆಗೆ ನಿರಂತರ ಧಕ್ಕೆ ತರುತ್ತಿರುವವರಲ್ಲಿ ಭಾನು ಮುಷ್ತಾಕ್ ಕೂಡ ಒಬ್ಬರು. ಹೀಗಾಗಿ ರಾಜ್ಯ ಸರ್ಕಾರ ಅವರ ಆಯ್ಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.