ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆ 2026ರ ಮತ ಎಣಿಕೆ ನಡೆಯುತ್ತಿದೆ. ಚುನಾವಣೆಯಲ್ಲಿ ಬಿಎನ್ಪಿ ಪಕ್ಷ ಭಾರೀ ಮುನ್ನಡೆಯಲ್ಲಿದ್ದು, ಸರ್ಕಾರ ರಚನೆ ಮಾಡುವುದಾಗಿ ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಘೋಷಣೆ ಮಾಡಿದೆ. ಬಾಂಗ್ಲಾದೇಶದಲ್ಲಿನ ಗಲಭೆ, ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ನಂತರ ನಡೆದ ಮೊದಲ ಚುನಾವಣೆ ಇದಾಗಿತ್ತು.
ಸದ್ಯದ ಮಾಹಿತಿ ಪ್ರಕಾರ ತಾರಿಕ್ ರೆಹಮಾನ್ ನಾಯಕತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಸರ್ಕಾರ ರಚನೆ ಮಾಡುವ ತಯಾರಿ ಆರಂಭಿಸಿದೆ. ಸದ್ಯದ ಮಾಹಿತಿ ಪ್ರಕಾರ ಒಟ್ಟು 299 ಕ್ಷೇತ್ರಗಳಲ್ಲಿ ಬಿಎನ್ಪಿ ಮತ್ತು ಅದರ ಮಿತ್ರಪಕ್ಷಗಳು 211 ಸ್ಥಾನಗಳಲ್ಲಿ ಮುನ್ನಡೆಯಲ್ಲಿವೆ.
ಪ್ರತಿಸ್ಪರ್ಧಿಯಾದ ಜಮಾತ್-ಇ-ಇಸ್ಲಾಮಿ ಮೈತ್ರಿಕೂಟ 70 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಬಿಎನ್ಪಿ ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಘೋಷಣೆ ಮಾಡಲಾಗಿದೆ.
‘ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚಿಸಲು ಸಜ್ಜಾಗಿದೆ’ ಎಂದು ಬಿಎನ್ಪಿಯ ಮಾಧ್ಯಮ ಘಟಕ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿದೆ.
ಬಾಂಗ್ಲಾದೇಶದಲ್ಲಿ ರಾಜಕೀಯ ಮರುಸ್ಥಾಪನೆಗಾಗಿ ಈ ಚುನಾವಣೆ ಭಾರೀ ಮಹತ್ವದ್ದಾಗಿತ್ತು. 2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ದಂಗೆಯ ಬಳಿಕ ಪ್ರಧಾನಿ ಶೇಖ್ ಹಸೀನಾ ದೇಶವನ್ನು ಬಿಟ್ಟು ಪರಾರಿಯಾಗಿದ್ದರು.
ಈ ದಂಗೆ, ರಾಜಕೀಯ ಅಸ್ಥಿರತೆ ಬಳಿಕ ಮೊದಲ ಬಾರಿಗೆ ಬಾಂಗ್ಲಾದೇಶದಲ್ಲಿ ಚುನಾವಣೆ ನಡೆದಿತ್ತು. ದೇಶದಲ್ಲಿ ನಡೆದ ದಂಗೆ ತಿಂಗಳುಗಳ ಕಾಲ ಜನಜೀವನ ಅಸ್ತವ್ಯಸ್ಥಗೊಳಿಸಿತ್ತು. ಆದ್ದರಿಂದ ಚುನಾವಣೆ ಫಲಿತಾಂಶದ ಬಳಿಕ ದೇಶದಲ್ಲಿ ಸ್ಥಿರ ಸರ್ಕಾರ ಸ್ಥಾಪನೆಯಾಗುವ ಭರವಸೆ ಇತ್ತು.
20 ವರ್ಷದ ಬಳಿಕ ಭೇಟಿ: ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಮುಖ್ಯಸ್ಥ ತಾರಿಕ್ ರೆಹಮಾನ್ 20 ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದರು. ಎರಡು ತಿಂಗಳ ಹಿಂದೆ ಅವರು ಬಾಂಗ್ಲಾದೇಶಕ್ಕೆ ವಾಪಸ್ ಆಗಿದ್ದರು. ಅವರನ್ನು ಸ್ವಾಗತಿಸಲು ಸುಮಾರು 5 ಲಕ್ಷ ಜನರು ಸೇರಿದ್ದರು. ಆಗಲೇ ಬಿಎನ್ಪಿ ಪಕ್ಷ ಚುನಾವಣೆಯಲ್ಲಿ ಜಯಗಳಿಸಲಿದೆ ಎಂದು ಅಂದಾಜಿಸಲಾಗಿತ್ತು.
ಲಂಡನ್ನಲ್ಲಿದ್ದ ತಾರಿಕ್ ರೆಹಮಾನ್ ತಾಯಿಯ ಅನಾರೋಗ್ಯದ ಕಾರಣ ಎರಡು ತಿಂಗಳ ಹಿಂದೆ ಬಾಂಗ್ಲಾದೇಶಕ್ಕೆ ವಾಪಸ್ ಆಗಿದ್ದರು. ಚುನಾವಣೆ ಘೋಷಣೆಯಾದಾಗ ತಾರಿಕ್ ರೆಹಮಾನ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು.
ತಾರಿಕ್ ರೆಹಮಾನ್ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಮತ್ತು ಜಿಯಾವುರ್ ರೆಹಮಾನ್ ದಂಪತಿಯ ಪುತ್ರ. ಬಿಎನ್ಪಿ ಪಕ್ಷದ ಸಂಸ್ಥಾಪಕರು ಸಹ ಇವರೇ. ತಾರಿಕ್ ತಾಯಿ 2001-2006ರ ತನಕ ಬಾಂಗ್ಲಾದೇಶದ ಪ್ರಧಾನಿಯಾಗಿದ್ದರು. ಆದರೆ ಆ ಸಮಯದಲ್ಲಿ ಆಡಳಿತ ಮಾಡುವಾಗ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಅವರನ್ನು ಬಂಧಿಸಿ, ರಾಷ್ಟ್ರದಲ್ಲಿ ಮಿಲಿಟರಿ ಆಡಳಿತ ಜಾರಿಗೊಳಿಸಲಾಗಿತ್ತು.
2008ರಲ್ಲಿ ಜೈಲಿನಿಂದ ಅವರು ಬಿಡುಗಡೆಯಾಗಿದ್ದರು ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್ಗೆ ಹೋಗಿದ್ದರು. ತಾಯಿಯ ಜೊತೆ ಲಂಡನ್ನಲ್ಲಿದ್ದ ತಾರಿಕ್ 2025ರ ಡಿಸೆಂಬರ್ನಲ್ಲಿ ಕ್ರಿಸ್ಮಸ್ ವೇಳೆಗೆ ಬಾಂಗ್ಲಾದೇಶಕ್ಕೆ ವಾಪಸ್ ಆಗಿದ್ದರು.

