ರಾಜ್ ಬರಿ(ಬಾಂಗ್ಲಾದೇಶ): ಬಾಂಗ್ಲಾದೇಶದ ಪದ್ಮಾ ನದಿಗೆ ಬಸ್ ಉರುಳಿಬಿದ್ದ ಪರಿಣಾಮ 23 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ರಸೆಲ್ ಮೊಲ್ಲಾ ಬುಧವಾರ ರಾತ್ರಿಯಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಮತ್ತೆ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ನಾವು ಇಲ್ಲಿಯವರೆಗೆ 23 ಮೃತ ದೇಹಗಳನ್ನು ಪತ್ತೆಹಚ್ಚಿದ್ದೇವೆ. ಇನ್ನೂ ಕೆಲವರು ಕಾಣೆಯಾಗಿರುವ ಸಾಧ್ಯತೆ ಇದೆ, ಮತ್ತು ಕೆಲವರು ಬದುಕುಳಿದಿದ್ದಾರೆ. ರಾತ್ರಿಯಾಗಿರುವುದರಿಂದ, ರಕ್ಷಣಾ ಕಾರ್ಯಾಚರಣೆಯನ್ನು ಸ್ವಲ್ಪಮಟ್ಟಿಗೆ ಸ್ಥಗಿತಗೊಳಿಸಲಾಗಿದೆ, ಆದರೆ ಸಂಯೋಜಿತ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ, ವಿವಿಧ ಪಡೆಗಳು – ಅಗ್ನಿಶಾಮಕ ಸೇವೆ, ನೌಕಾಪಡೆ, ಪೊಲೀಸ್ ಮತ್ತು ಇತರ ಗುಂಪುಗಳು – ರಕ್ಷಣಾ ಕಾರ್ಯವನ್ನು ನಡೆಸುತ್ತಿವೆ ಎಣದು ಹೇಳಿದ್ದಾರೆ.
ಸಂಜೆ 5 ಗಂಟೆ ಸುಮಾರಿಗೆ ದೌಲತ್ಡಿಯಾದ ದೋಣಿ ನಿಲ್ದಾಣ ಸಂಖ್ಯೆ 3 ರ ಮುಂದೆ ದೋಣಿಯಿಂದ ಪದ್ಮಾ ನದಿಗೆ ಪ್ರಯಾಣಿಕರ ಬಸ್ ಬಿದ್ದಿತು. ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್, ರಾಜ್ಬರಿಯಿಂದ 128 ಕಿಲೋಮೀಟರ್ ದೂರದಲ್ಲಿರುವ ಢಾಕಾಗೆ ತೆರಳುತ್ತಿತ್ತು.
ರಾತ್ರಿ 11:30 ರ ಹೊತ್ತಿಗೆ, ಹಡಗಿನ ಕ್ರೇನ್ ಬಳಸಿ ಇಡೀ ಬಸ್ ಅನ್ನು ಮೇಲಕ್ಕೆತ್ತಲಾಯಿತು. ದುರಂತದಲ್ಲಿ ಇಬ್ಬರು ಮಕ್ಕಳು, 10 ಮಹಿಳೆಯರು ಸೇರಿದಂತೆ 23 ಜನ ಮೃತಪಟ್ಟಿದ್ದಾರೆ.

