ಕೋಲ್ಕತ್ತಾ: ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಗಡಿ ದಾಟಿ ಬಂದಿದ್ದ ನಕಲಿ ಆಧಾರ್ ಕಾರ್ಡ್ ಹೊಂದಿದ್ದ 14 ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಸೋಂನಿಂದ ದೆಹಲಿಗೆ ತೆರಳುತ್ತಿದ್ದಾಗ ಇವರನ್ನು ಬಂಧಿಸಲಾಗಿದೆ. ಬುಧವಾರ ರಾತ್ರಿ ಜಲ್ಪೈಗುರಿ ನಿಲ್ದಾಣದಲ್ಲಿ ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ದೆಹಲಿಗೆ ತೆರಳುತ್ತಿದ್ದ ಕಾಮಾಕ್ಯ-ಈಶಾನ್ಯ ಎಕ್ಸ್ಪ್ರೆಸ್ ರೈಲಿನಲ್ಲಿ ಅಪ್ರಾಪ್ತ ವಯಸ್ಕರು ಸೇರಿದಂತೆ 14 ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಆರ್ಪಿಎಫ್ ಸಿಬ್ಬಂದಿ ವಿಶೇಷ ಭದ್ರತಾ ತಪಾಸಣೆ ನಡೆಸುತ್ತಿದೆ. ತಪಾಸಣೆ ವೇಳೆ ಅವರ ಹೆಸರುಗಳನ್ನು ಅವರ ಆಧಾರ್ ಕಾರ್ಡ್ಗಳೊಂದಿಗೆ ಪರಿಶೀಲಿಸಿದಾಗ ವ್ಯತ್ಯಾಸಗಳು ಕಂಡುಬಂದಿವೆ. ಅನುಮಾನದ ಹಿನ್ನೆಲೆಯಲ್ಲಿ 14 ಜನರನ್ನು ಜಲ್ಪೈಗುರಿ ರಸ್ತೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತರು ಆಧಾರ್ ಕಾರ್ಡ್ಗಳನ್ನು ಹೊಂದಿದ್ದು, ಅವುಗಳು ನಕಲಿಯೋ ಅಥವಾ ಡಿಎಫ್ಐಎನ್ಎಸ್ಐಪಿಯ ಮೂಲಕ ಪಡೆದಿದ್ದಾರಾ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ.
ಮೇಲ್ನೋಟಕ್ಕೆ ಆರ್ಪಿಎಫ್ ಅಧಿಕಾರಿಗಳು ಇವರು ಬಾಂಗ್ಲಾದೇಶದ ನಾಗರಿಕರೆಂದು ದೃಢಪಡಿಸಿದ್ದಾರೆ. ಕಾಮಾಕ್ಯದಿಂದ ಟಿಕೆಟ್ ಖರೀದಿಸಿ ದೆಹಲಿಗೆ ಪ್ರಯಾಣಿಸುವ ಉದ್ದೇಶದಿಂದ ಸಾಮಾನ್ಯ ಕೋಚ್ ಹತ್ತಿದ್ದರು. ದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸಬೇಕಿತ್ತೆಂದು ಬಂಧಿತರು ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ. 14 ಜನರಲ್ಲಿ ಐವರು ಪುರುಷರು, ಐವರು ಮಹಿಳೆಯರು, ಒಬ್ಬ ಅಪ್ರಾಪ್ತ ಬಾಲಕಿ ಮತ್ತು ಮೂವರು ಅಪ್ರಾಪ್ತ ಬಾಲಕರು ಸೇರಿದ್ದು, ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣೆ ವೇಳೆ ಇಷ್ಟೊಂದು ದೊಡ್ಡ ಸಂಖ್ಯೆಯ ವಿದೇಶಿ ಪ್ರಜೆಗಳು ಗಡಿ ದಾಟಿ ಭಾರತವನ್ನು ಪ್ರವೇಶಿಸಲು ಹೇಗೆ ಸಾಧ್ಯವಾಯಿತು ಮತ್ತು ನಕಲಿ ಗುರುತಿನ ದಾಖಲೆಗಳನ್ನು ಪಡೆಯಲು ಅವರಿಗೆ ಯಾರು ಸಹಾಯ ಮಾಡಿದರು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ

