ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ಮೊತ್ತದ ಯೋಜನೆ ಸಿದ್ಧ: ಇಲ್ಲಿ 20% ಜನ ಐಟಿ ವೃತ್ತಿಪರರು: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ತಂತ್ರಜ್ಞಾನ ಹಾಗೂ ಪ್ರತಿಭೆ ಬೆಂಗಳೂರಿನ ಎರಡು ಆಧಾರಸ್ತಂಭಗಳು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ನಲ್ಲಿ ಬೆಂಗಳೂರು ಟೆಕ್ ಸಮಿಟ್ 2025 ‘ಫ್ಯೂಚರೈಸ್ ‘ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಿ ಮಾತನಾಡಿದರು. ದೇಶದ ಐಟಿ ರಫ್ತಿನಲ್ಲಿ ಶೇ.40-45ರಷ್ಟು ಪಾಲು ಬೆಂಗಳೂರಿನದ್ದಾಗಿದೆ. ನಮ್ಮಲ್ಲಿ ಹೆಚ್ಚು ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್, ಮೆಡಿಕಲ್ ಕಾಲೇಜುಗಳಿವೆ. ಇಲ್ಲಿರುವ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ. ನಮ್ಮ ಸರ್ಕಾರ ಅನ್ವೇಷಣೆ, ತಂತ್ರಜ್ಞಾನ, ಬಂಡವಾಳ ಹೂಡಿಕೆ, ಪ್ರತಿಭೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ. ನೀವು ನಮ್ಮ ಮೇಲೆ ನಂಬಿಕೆ ಇಟ್ಟು ಬೆಂಗಳೂರಿಗೆ ಆಗಮಿಸಿದ್ದೀರಿ, ನಿಮ್ಮ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ಹೀಗಾಗಿ ನಾವು ನಿಮಗೆ ಅತ್ಯುತ್ತಮ ಮೂಲ ಸೌಕರ್ಯ ಒದಗಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಫ್ಯೂಚರೈಸ್ ಎಂಬುದು ಕೇವಲ ಘೋಷವಾಕ್ಯವಲ್ಲ, ಇದು ಬದಲಾವಣೆ, ನಾಳಿನ ಭವಿಷ್ಯದ ಅಡಿಪಾಯ. ಇಂದು ನೀವು ನಮ್ಮ ಮೇಲೆ ವಿಶ್ವಾಸವಿಟ್ಟು ಇಲ್ಲಿಗೆ ಆಗಮಿಸಿರುವುದಕ್ಕೆ ನಮಗೆ ಹೆಮ್ಮೆ ಇದೆ. ಈ ಕಾರ್ಯಕ್ರಮದ ಯಶಸ್ಸಿನಲ್ಲಿ ನಮ್ಮ ರಾಜ್ಯದ ಯಶಸ್ಸು ಅಡಗಿದೆ. ನಾನು ಇಂದು ನಿಮ್ಮ ಮುಂದೆ ಕೇವಲ ಉಪಮುಖ್ಯಮಂತ್ರಿಯಾಗಿ ನಿಂತಿಲ್ಲ, ಎಲ್ಲ ಬಂಡವಾಳ ಹೂಡಿಕೆ, ನಿಮ್ಮ ಆಲೋಚನೆಗಳ ಧ್ವನಿಯಾಗಿ ನಿಂತಿದ್ದೇನೆ. ಕರ್ನಾಟಕದ ಮೂಲಕ ಜಾಗತಿಕ ಭವಿಯ್ ಭವಿಷ್ಯ ರೂಪಿಸಲು ನಾವಿಂದು ಇಲ್ಲಿ ಸೇರಿದ್ದೇವೆ ಎಂದರು.

ರಾಜ್ಯದಲ್ಲಿ 1998ರಿಂದ ಈ ಐಟಿ ಸಮ್ಮೇಳನ ನಡೆದುಕೊಂಡು ಬರುತ್ತಿದ್ದು, ಈ ಸಮ್ಮೇಳನ ರಾಜ್ಯದ 28ನೇ ಐಟಿ ಕ್ಷೇತ್ರದ ಕಾರ್ಯಕ್ರಮವಾಗಿದೆ. ಬೆಂಗಳೂರು ಟೆಕ್ ಸಮಿಟ್ ಏಷ್ಯಾದ ಅತಿ ದೊಡ್ಡ ಟೆಕ್ ಸಮ್ಮೇಳನಗಳಲ್ಲಿ ಒಂದಾಗಿದೆ. ಇದರೊಂದಿಗೆ ಬೆಂಗಳೂರು ಜಾಗತಿಕ ಐಟಿ ರಾಜಧಾನಿಯಾಗುವತ್ತ ಸಾಗಲು ನೆರವಾಗಲಿದೆ. ಮೊದಲ ಬಾರಿಗೆ ಬೆಂಗಳೂರು ಅರಮನೆ ಮೈದಾನದಿಂದ ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ಗೆ ಸ್ಥಳಾಂತರವಾಗಿದೆ. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಈ ಕೇಂದ್ರ ಆರಂಭಕ್ಕೆ ಅನುಮತಿ ನೀಡಿದ್ದೆ. ಈ ಸಮ್ಮೇಳನದಲ್ಲಿ 10 ಸಾವಿರ ನವೋದ್ಯಮಗಳು, 60 ಸಾವಿರ ಮಂದಿ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಸಮ್ಮೇಳನದಲ್ಲಿ ವಿಶ್ವದ ನಾನಾ ಭಾಗಗಳಿಂದ 550 ಮಂದಿ ತಮ್ಮ ಅಭಿಪ್ರಾಯವನ್ನು ಈ ಸಮ್ಮೇಳನದಲ್ಲಿ ಹಂಚಿಕೊಳ್ಳಲಿದ್ದಾರೆ. ಕರ್ನಾಟಕ ಐಟಿ ಕ್ಷೇತ್ರದ ದಿಗ್ಗಜನಾಗಿ ಬೆಳೆದಿಲ್ಲ, ಖಾಸಗಿ ವಲಯಕ್ಕೆ ಸರ್ಕಾರದ ನೆರವು ಇಂದು ಈ ಸ್ಥಿತಿಗೆ ತಲುಪಲು ಕಾರಣವಾಗಿದೆ. ದೇಶದಲ್ಲಿ ಮೊದಲು ಐಟಿ ನೀತಿ ಜಾರರಿಗೊಳಿಸಿದ ರಾಜ್ಯ ಕರ್ನಾಟಕ. ಐಟಿ ಇಲಾಖೆ ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ. ಬೆಂಗಳೂರನ್ನು ಗಾರ್ಡನ್ ಸಿಟಿ, ಸಿಲಿಕಾನ್ ವ್ಯಾಲಿ ಆಪ್ ಇಂಡಿಯಾ, ಏಷ್ಯಾದ ನವೋದ್ಯಮಗಳ ರಾಜಧಾನಿ ಎಂಬ ಖ್ಯಾತಿ ಪಡೆದಿದೆ ಎಂದು ಶ್ಲಾಘಿಸಿದರು.

ಬೆಂಗಳೂರು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬೆಳೆದಿದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ವೃತ್ತಿಪರರು ಇದದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರಿದ್ದಾರೆ. ಇದು ಬೆಂಗಳೂರಿನ ಐಟಿ ಕ್ಷೇತ್ರದ ಸಾಮರ್ಥ್ಯ. ಬೆಂಗಳೂರಿನಲ್ಲಿ 1.40 ಲಕ್ಷ ಜನರಿದ್ದು, ಆ ಪೈಕಿ 20% ಜನರು ಐಟಿ ವೃತ್ತಿಪರರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ಮೊತ್ತದ ಯೋಜನೆ:
ನಮ್ಮ ಸರ್ಕಾರ ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ಮೀಸಲಿಡುತ್ತಿದೆ. 41 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ, ಅವಳಿ ಸುರಂಗ, ಎಲಿವೇಟೆಡ್ ಕಾರಿಡಾರ್, ಬಫರ್ ರಸ್ತೆಗಳು ಸೇರಿದಂತೆ 117 ಕಿ.ಮೀ ಉದ್ಧದ ಬೆಂಗಳು ಬಿಸಿನೆಸ್ ಕಾರಿಡಾರ್ ಯೋಜನೆ ರೂಪಿಸಲಾಗಿದೆ. ಇದರ ಜೊತೆಗೆ ಬಿಡದಿಯಲ್ಲಿ ಎಐ ಸಿಟಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇನ್ನು ಬೆಂಗಳೂರಿನ ದಕ್ಷಿಣ ಭಾಗದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಅತ್ಯುತ್ತಮ ಹವಾಮಾನ ಹಾಗೂ ಸಂಸ್ಕೃತಿಗೆ ಬೆಂಗಳೂರನ್ನು ಮೀರಿಸುವ ಮತ್ತೊಂದು ನಗರ ಬೇರೊಂದಿಲ್ಲ. ನಮ್ಮ ಸರ್ಕಾರ ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಇಲಾಖೆಯನ್ನು ಆರಂಭಿಸಲಿದೆ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಿಎಸ್ಆರ್ ಶಾಲೆಗಳನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕೆ ನೀವೆಲ್ಲರೂ ಹೆಚ್ಚಿನ ಸಹಕಾರ ನೀಡಬೇಕಾಗಿದೆ. ಜೊತೆಗೆ ಬೆಂಗಳೂರಿನಿಂದಾಚೆಗೆ ಕೈಗಾರಿಕೆಗಳ ಅಭಿವೃದ್ಧಿಗೆ ಹೊಸ ನೀತಿ ರೂಪಿಸಲಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ನೀವು ಬಲಿಷ್ಠವಾದರೆ, ನಾವು ಬಲಿಷ್ಠವಾಗುತ್ತೇವೆ. ನಿಮ್ಮ ಜೊತೆಗಿನ ಸಹಭಾಗಿತ್ವಕ್ಕೆ ನಾವು ಎದುರು ನೋಡುತ್ತೇವೆ. ನಾವೆಲ್ಲರೂ ಸೇರಿ ಉತ್ತಮ ಬೆಂಗಳೂರ, ಉತ್ತಮ ಕರ್ನಾಟ ಹಾಗೂ ಉತ್ತಮ ಭಾರತದ ನಿರ್ಮಾಣ ಮಾಡೋಣ. ಬೆಂಗಳೂರು ಜಾಗತಿಕ ನಗರ, ಜಾಗತಿಕ ಮಟ್ಟದಲ್ಲಿ ನಾವು ಸ್ಪರ್ಧಿಸಲು ಬಯಸುತ್ತೇವೆ. ಇದು ನಿಮ್ಮ ನಗರ, ಈ ನಗರವನ್ನು ಮತ್ತಷ್ಟು ಬಲವಾಗಿ ಬೆಳೆಸಲು ಸಹಕರಿಸಿ ಎಂದು ಕರೆ ನೀಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read