ಬೆಂಗಳೂರು: ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ರಸ್ತೆ ಬದಿಯ ಪಾರ್ಕಿಂಗ್ ಗೊಂದಲಗಳಿಗೆ ಬ್ರೇಕ್ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಬೃಹತ್ ಯೋಜನೆ ರೂಪಿಸಿದೆ. ತಮ್ಮ ಮನೆ ಮುಂದಿನ ರಸ್ತೆಗಳಲ್ಲೇ ವಾಹನಗಳನ್ನು ಸಾಲಾಗಿ ನಿಲ್ಲಿಸುವ ಮಾಲೀಕರಿಗೆ ಶಾಕ್ ನೀಡಲು ಹೊರಟಿದ್ದು, ಮನೆ ಹೊರಗಿನ ರಸ್ತೆ ಪಾರ್ಕಿಂಗ್ಗೆ ವಾರ್ಷಿಕ ಕನಿಷ್ಠ ₹15,000 ದಿಂದ ₹25,000 ವರೆಗೆ ಶುಲ್ಕ ವಿಧಿಸುವ ಹೊಸ ಪಾರ್ಕಿಂಗ್ ನೀತಿಯ ಕರಡು ಪ್ರಸ್ತಾವನೆಯನ್ನು ಪ್ರಕಟಿಸಿದೆ.
ಈ ಹೊಸ ಕರಡು ನೀತಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಜಿಬಿಎ ಒಂದು ತಿಂಗಳ ಕಾಲಾವಕಾಶ ನೀಡಿದೆ.
ವಸತಿ ರಸ್ತೆ ಪಾರ್ಕಿಂಗ್ಗೆ ವಾರ್ಷಿಕ ಪಾಸ್
ಹೊಸ ನಿಯಮದ ಪ್ರಕಾರ, ಸ್ವಂತ ಕಾಂಪೌಂಡ್ ಒಳಗಡೆ ಜಾಗವಿಲ್ಲದೆ ಮನೆ ಹೊರಗಿನ ವಸತಿ ರಸ್ತೆಗಳಲ್ಲಿ ಕಾರು ನಿಲ್ಲಿಸುವ ನಿವಾಸಿಗಳಿಗೆ ಮಾಸಿಕ ಹಾಗೂ ವಾರ್ಷಿಕ ಪಾಸ್ ವ್ಯವಸ್ಥೆ ಪರಿಚಯಿಸಲಾಗುತ್ತಿದೆ.
ಸಣ್ಣ ಕಾರುಗಳು: ವಾರ್ಷಿಕ ₹15,000 ಶುಲ್ಕ
ಮಧ್ಯಮ ಗಾತ್ರದ ಕಾರುಗಳು: ವಾರ್ಷಿಕ ₹20,000 ಶುಲ್ಕ
ಎಸ್ಯುವಿ (SUV) ವಾಹನಗಳು: ವಾರ್ಷಿಕ ₹25,000 ಶುಲ್ಕ
ಗಮನಿಸಿ: ಪಾರ್ಕಿಂಗ್ಗೆ ಅನುಮತಿ ನೀಡಲಾದ ನಿರ್ದಿಷ್ಟ ವಸತಿ ಪ್ರದೇಶಗಳನ್ನು ಹೊರತುಪಡಿಸಿ ಬೇರೆಡೆ ವಾಹನ ನಿಲ್ಲಿಸಿದರೆ ಅದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ.
ರಸ್ತೆಗಳ ವರ್ಗೀಕರಣ ಮತ್ತು ಶುಲ್ಕದ ವಿವರ
ನಗರದ ರಸ್ತೆಗಳನ್ನು ಎ, ಬಿ ಮತ್ತು ಸಿ ಎಂದು ಮೂರು ಭಾಗಗಳಾಗಿ ವಿಂಗಡಿಸಿ ಆನ್-ಸ್ಟ್ರೀಟ್ (ರಸ್ತೆ ಮೇಲೆ) ಹಾಗೂ ಆಫ್-ಸ್ಟ್ರೀಟ್ (ರಸ್ತೆ ಹೊರತಾದ ಜಾಗ) ಪಾರ್ಕಿಂಗ್ಗೆ ಪ್ರತ್ಯೇಕ ದರ ನಿಗದಿಪಡಿಸಲು ಉದ್ದೇಶಿಸಲಾಗಿದೆ:
ಪಾರ್ಕಿಂಗ್ ಶುಲ್ಕದ ವಿವರ
ಎ ವರ್ಗದ ರಸ್ತೆ
ಆನ್-ಸ್ಟ್ರೀಟ್: ದ್ವಿಚಕ್ರ ₹40 / ಕಾರು ₹80 ಪ್ರತಿ ಗಂಟೆಗೆ
ಆಫ್-ಸ್ಟ್ರೀಟ್: ದ್ವಿಚಕ್ರ ₹20 / ಕಾರು ₹40 ಪ್ರತಿ ಗಂಟೆಗೆ
ಮಾಸಿಕ ಪಾಸ್: ದ್ವಿಚಕ್ರ ₹2,000 / ಕಾರು ₹4,000
ಬಿ ವರ್ಗದ ರಸ್ತೆ
ಆನ್-ಸ್ಟ್ರೀಟ್: ದ್ವಿಚಕ್ರ ₹30 / ಕಾರು ₹60 ಪ್ರತಿ ಗಂಟೆಗೆ
ಆಫ್-ಸ್ಟ್ರೀಟ್: ದ್ವಿಚಕ್ರ ₹15 / ಕಾರು ₹30 ಪ್ರತಿ ಗಂಟೆಗೆ
ಮಾಸಿಕ ಪಾಸ್: ದ್ವಿಚಕ್ರ ₹1,500 / ಕಾರು ₹3,000
ಸಿ ವರ್ಗದ ರಸ್ತೆ
ಆನ್-ಸ್ಟ್ರೀಟ್: ದ್ವಿಚಕ್ರ ₹20 / ಕಾರು ₹40 ಪ್ರತಿ ಗಂಟೆಗೆ
ಆಫ್-ಸ್ಟ್ರೀಟ್: ದ್ವಿಚಕ್ರ ₹10 / ಕಾರು ₹20 ಪ್ರತಿ ಗಂಟೆಗೆ
ಮಾಸಿಕ ಪಾಸ್: ದ್ವಿಚಕ್ರ ₹1,000 / ಕಾರು ₹2,000
ಮನೆ ಮುಂದೆ ವಾಹನ ನಿಲ್ಲಿಸುವುದು ಹಕ್ಕಲ್ಲ’
ಮನೆಯ ಮುಂದೆ ರಸ್ತೆ ಇರುವುದನ್ನೇ ಬಂಡವಾಳ ಮಾಡಿಕೊಂಡು ಕಾರು ನಿಲ್ಲಿಸುವ ಹಕ್ಕು ಇನ್ಮುಂದೆ ಇರುವುದಿಲ್ಲ. ಮನೆ ಮಾಲೀಕರು ತಮ್ಮ ಬಾಡಿಗೆದಾರರಿಗೂ ಸೂಕ್ತ ಪಾರ್ಕಿಂಗ್ ಜಾಗ ಕಲ್ಪಿಸಬೇಕು. ಜಾಗವಿಲ್ಲದೇ ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ದಂಡ ಪಾವತಿಸಬೇಕಾಗುತ್ತದೆ.
ಕಠಿಣ ನಿಷೇಧಿತ ಪ್ರದೇಶಗಳು:
ಮೆಟ್ರೋ ಹಾಗೂ ಬಸ್ ನಿಲ್ದಾಣಗಳ ಸುತ್ತಮುತ್ತ ಪಾರ್ಕಿಂಗ್ ಸಂಪೂರ್ಣ ನಿಷೇಧ.
ಟ್ರಾಫಿಕ್ ಸಿಗ್ನಲ್ಗಳಿಂದ 50 ಮೀಟರ್ ವ್ಯಾಪ್ತಿ ಹಾಗೂ ಉಪಮುಖ್ಯ ರಸ್ತೆಗಳಲ್ಲಿ 25 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲ್ಲಿಸುವಂತಿಲ್ಲ.
ಖಾಲಿ ನಿವೇಶನದಾರರಿಗೆ ಆಸ್ತಿ ತೆರಿಗೆ ವಿನಾಯಿತಿ
ನಗರದಲ್ಲಿರುವ ಖಾಲಿ ನಿವೇಶನಗಳನ್ನು ಪಾರ್ಕಿಂಗ್ ಸ್ಥಳಗಳಾಗಿ ಪರಿವರ್ತಿಸಲು ಜಿಬಿಎ ಪ್ರೋತ್ಸಾಹ ನೀಡಲಿದೆ. ತಮ್ಮ ಖಾಲಿ ಜಾಗವನ್ನು ಸಾರ್ವಜನಿಕ ಪಾರ್ಕಿಂಗ್ಗೆ ಬಿಟ್ಟುಕೊಡುವ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಪ್ರಸ್ತಾವನೆಯಿದೆ. ಅಲ್ಲದೆ, ರಾತ್ರಿ 8ರಿಂದ ಬೆಳಿಗ್ಗೆ 8ರವರೆಗೆ ಆಫ್-ಸ್ಟ್ರೀಟ್ ಸ್ಥಳಗಳಲ್ಲಿ ರಾತ್ರಿ ಪಾರ್ಕಿಂಗ್ಗೂ ಅವಕಾಶ ಕಲ್ಪಿಸಲಾಗುತ್ತದೆ.ಸದ್ಯ ಬಿಡುಗಡೆಯಾಗಿರುವ ಈ ಕರಡು ಪ್ರಸ್ತಾವನೆಯು ಅಂತಿಮ ಅನುಮೋದನೆ ಪಡೆದು ಜಾರಿಗೆ ಬಂದರೆ, ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವ ಪ್ರತಿಯೊಬ್ಬ ವಾಹನ ಸವಾರರ ಜೇಬಿಗೂ ಪಾರ್ಕಿಂಗ್ ಬಿಸಿ ತಟ್ಟುವುದು ಖಚಿತ.

