ಬೆಂಗಳೂರು: ನಗರದಲ್ಲಿ ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ಕಲ್ಪಿಸುವ ಉದ್ದೇಶದಿಂದ ನಡೆಸಲಾಗಿರುವ ‘ಸುರಕ್ಷಿತ ಪಾದಚಾರಿ ಮಾರ್ಗ’ ಅಭಿಯಾನಕ್ಕೆ ಮಹತ್ವದ ಯಶಸ್ಸು ದೊರೆತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 750 ಕಿಲೋಮೀಟರ್‌ಗಿಂತ ಹೆಚ್ಚು ಪಾದಚಾರಿ ಮಾರ್ಗಗಳಲ್ಲಿದ್ದ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ. ಮತ್ತೆ ಅತಿಕ್ರಮಣವಾಗದಂತೆ ಬಿಬಿಎಂಪಿ ಅಧಿಕಾರಿಗಳು ದಿಢೀರ್ ಪರಿಶೀಲನೆ ಹಾಗೂ ಜಂಟಿ ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಿದ್ದಾರೆ.
ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಮಾಹಿತಿ ಪ್ರಕಾರ, ಜುಲೈ 1ರಿಂದ 31ರವರೆಗೆ ನಡೆದ ವಿಶೇಷ ಅಭಿಯಾನದಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಅಕ್ರಮವಾಗಿ ನಿರ್ಮಿಸಿದ್ದ ಅಂಗಡಿಗಳು, ತಳ್ಳುಗಾಡಿಗಳು ಹಾಗೂ ತಾತ್ಕಾಲಿಕ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ. ಹಿರಿಯ ನಾಗರಿಕರು, ಮಕ್ಕಳು ಹಾಗೂ ಸಾರ್ವಜನಿಕರು ಸುರಕ್ಷಿತವಾಗಿ ಸಂಚರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಪೀಣ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ನಿರ್ಬಂಧ
ಇನ್ನೊಂದೆಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪೀಣ್ಯ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ) ಮೇಲ್ಸೇತುವೆಯಲ್ಲಿ ಡಾಂಬರೀಕರಣ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಆಗಸ್ಟ್ 12ರವರೆಗೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.ಸೋಮವಾರದಿಂದ ಶುಕ್ರವಾರ: ರಾತ್ರಿ 10.00 ರಿಂದ ಬೆಳಿಗ್ಗೆ 5.00ರವರೆಗೆ
ಶನಿವಾರ ಹಾಗೂ ಭಾನುವಾರ: ಮಧ್ಯರಾತ್ರಿ 12.00 ರಿಂದ ಬೆಳಿಗ್ಗೆ 5.00ರವರೆಗೆ. ಈ ಅವಧಿಯಲ್ಲಿ ತುಮಕೂರು–ಬೆಂಗಳೂರು ದಿಕ್ಕಿನಿಂದ ಬರುವ ವಾಹನಗಳು ಸರ್ವೀಸ್ ರಸ್ತೆಯ ಮೂಲಕ ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.

