ಬೆಂಗಳೂರು: ನಗರದ ಫುಟ್ಪಾತ್ಗಳನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿ ಮತ್ತು ಮುಕ್ತವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ಸ್ವತಃ ನಗರ ಸುತ್ತಾಟ ನಡೆಸಿ ಪರಿಶೀಲಿಸಿದರು. ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯ ಪ್ರಗತಿಯನ್ನು ವೀಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನಗರದಲ್ಲಿ ಫುಟ್ಪಾತ್ಗಳ ಮೇಲೆ ಅಕ್ರಮವಾಗಿ ನಿರ್ಮಿಸಲಾದ ಶೆಡ್ಗಳು, ಅಂಗಡಿಗಳು, ಜಾಹೀರಾತು ಫಲಕಗಳು ಹಾಗೂ ಇತರೆ ಅಡ್ಡಿಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಈ ವೇಳೆ ಪಾದಚಾರಿಗಳಿಗೆ ಯಾವುದೇ ತೊಂದರೆ ಆಗದಂತೆ ಹಾಗೂ ತೆರವುಗೊಳಿಸಿದ ಸ್ಥಳಗಳಲ್ಲಿ ಮರು ಒತ್ತುವರಿ ಆಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸಿಎಂ ಸೂಚನೆ ನೀಡಿದರು.
ರಾಜ್ಯ ಸರ್ಕಾರ ಆರಂಭಿಸಿರುವ ‘ಸೇಫ್ ಫುಟ್ಪಾತ್ ಅಭಿಯಾನ’ ಅಡಿಯಲ್ಲಿ ಬೆಂಗಳೂರಿನ ಐದು ನಗರ ನಿಗಮ ವ್ಯಾಪ್ತಿಯಲ್ಲೂ ಹಂತ ಹಂತವಾಗಿ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿನ ಫುಟ್ಪಾತ್ಗಳನ್ನು ಸಂಪೂರ್ಣವಾಗಿ ಪಾದಚಾರಿಗಳ ಬಳಕೆಗೆ ಮುಕ್ತಗೊಳಿಸುವುದು ಸರ್ಕಾರದ ಗುರಿಯಾಗಿದೆ.
ಸಿಟಿ ರೌಂಡ್ಸ್ ವೇಳೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ, ಉತ್ತಮ ಗುಣಮಟ್ಟದ ಫುಟ್ಪಾತ್ ನಿರ್ಮಾಣ, ನಿರ್ವಹಣೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದರು. ಜೊತೆಗೆ, ತೆರವುಗೊಳಿಸಿದ ಪ್ರದೇಶಗಳಲ್ಲಿ ಮತ್ತೆ ಒತ್ತುವರಿ ಆಗದಂತೆ ನಿರಂತರ ನಿಗಾ ಮತ್ತು ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಾದಚಾರಿಗಳ ಬಗ್ಗೆ ನಮ್ಮ ಸಹೃದಯತೆ ಗೊತ್ತಾಗುವುದು ಪಾದಚಾರಿ ಮಾರ್ಗಗಳ ಮೂಲಕ. ಫುಟ್ಪಾತ್ಗಳು ಸುರಕ್ಷಿತವಾಗಿದ್ದರೆ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿಶೇಷ ಚೇತನರು ಆತ್ಮವಿಶ್ವಾಸದಿಂದ ಸಂಚರಿಸಬಹುದು. ಪಾದಚಾರಿ ಸ್ನೇಹಿ ಬೆಂಗಳೂರಿನ ಎಲ್ಲರ ಜವಾಬ್ದಾರಿ. ನಗರದ ಅಭಿವೃದ್ಧಿ ಎಂದರೆ ಕೇವಲ ರಸ್ತೆ ಅಗಲೀಕರಣವಲ್ಲ. ಅಡೆತಡೆಯಿಲ್ಲದ ಫುಟ್ಪಾತ್ಗಳನ್ನು ಒದಗಿಸುವುದೂ ಅಷ್ಟೇ ಮುಖ್ಯ ಎಂದು ಸಿಎಂ ಹೇಳಿದ್ದಾರೆ.
ಯಾವುದೇ ನಗರ ಉತ್ತಮ ನಗರ, ನಾಗರಿಕ ಸ್ನೇಹಿ ಅನ್ನಿಸಿಕೊಳ್ಳುವುದಕ್ಕೆ ಇರುವ ನಾಗರಿಕ ಮಾನದಂಡಗಳಲ್ಲಿ ಆ ನಗರದ ಪಾದಚಾರಿ ಮಾರ್ಗಗಳು ಹೇಗಿವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಪಾದಚಾರಿಗಳ ಹಕ್ಕು ಕಾಪಾಡುವುದು ನಾಗರಿಕ ಸಮಾಜದ ಕರ್ತವ್ಯ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಫುಟ್ಪಾತ್ ತೆರವು ವಿಶೇಷ ಕಾರ್ಯಾಚರಣೆ ಸುರಕ್ಷಿತ, ಸುಗಮ ಸಂಚಾರದತ್ತ ಮಹತ್ವದ ಹೆಜ್ಜೆಯಾಗಿದೆ. ಇಂದು ನಾನು ಸ್ಥಳ ವೀಕ್ಷಣೆ ನಡೆಸಿ ನಗರ ಪ್ರದಕ್ಷಿಣೆಯಲ್ಲೂ ಭಾಗವಹಿಸುತ್ತಿದ್ದೇನೆ ಎಂದು ಸಿಎಂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

