ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಶಾಲಾ ಸಮಯದಲ್ಲಿ ಭಾರ್ ವಾಹನಗಳ ಸಂಚಾರವನ್ನು ನಿಷೇದಿಸಲಾಗಿದೆ. ಪೂರ್ವ ಬೆಂಗಳೂರಿನ ಸಾರಿಗೆ ದಟ್ಟಣೆ ನಿಯಂತ್ರಿಸಲು ಮತ್ತು ಶಾಲಾ ಮಕ್ಕಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಚಾರ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ.
ಅತ್ಯಂತ ಜನನಿಬಿಡ ರಸ್ತೆಯಾದ ವರ್ತೂರು-ಗುಂಜೂರು (ರಾಜ್ಯ ಹೆದ್ದಾರಿ-35) ಮಾರ್ಗದಲ್ಲಿ ಶಾಲಾ ವೇಳೆಯಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗಿದೆ.
ಹಿಂದೆ ಬೆಳಿಗ್ಗೆ 7 ರಿಂದ 11 ರವರೆಗೆ ಮಾತ್ರ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಇದೀಗ ಸಂಚಾರ ದಟ್ಟಣೆ ವಿಪರೀತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ನೂತನ ವೇಳಾಪಟ್ಟಿ ಜಾರಿಗೆ ತಂದಿದ್ದಾರೆ.
ಬೆಳಿಗ್ಗೆ 7:00 ರಿಂದ 11:00 ಗಂಟೆಯವರೆಗೆ ಮಧ್ಯಾಹ್ನ 1:00 ರಿಂದ 3:00 ಗಂಟೆಯವರೆಗೆ ಸಂಜೆ4:00 ರಿಂದ 9:00 ಗಂಟೆಯವರೆಗೆ ಈ ಅವಧಿಯಲ್ಲಿ ಯಾವುದೇ ಭಾರಿ ಸರಕು ಸಾಗಣೆ ವಾಹನಗಳು ಅಥವಾ ಟ್ರಕ್‌ಗಳು ವರ್ತೂರು-ಗುಂಜೂರು ಕ್ಯಾರಿಡಾರ್ ಪ್ರವೇಶಿಸುವಂತಿಲ್ಲ.
ಈ ವೇಳಾಪಟ್ಟಿಯು ಶಾಲಾ ಬಸ್‌ಗಳ ಸಂಚಾರದ ಸಮಯ ಮತ್ತು ಪೀಕ್ ಹವರ್‌ಗಳನ್ನು ಸಂಪೂರ್ಣವಾಗಿ ಒಳಗೊಳ್ಳುತ್ತದೆ. ಇದರಿಂದ ಟ್ರಾಫಿಕ್ ಜಾಅಮ್ ನಿಂದ ಒದ್ದಾಡುತ್ತಿದ್ದ ಶಾಲಾ ಮಕ್ಕಳು, ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.
ವರ್ತೂರು-ಗುಂಜೂರು ಭಾಗದಲ್ಲಿ ರಸ್ತೆಗಳು ಕಿರಿದಾಗಿದ್ದು, ಹಲವು ಟಿ-ಜಂಕ್ಷನ್‌ಗಳನ್ನು ಹೊಂದಿವೆ. ರಾಜ್ಯ ಹೆದ್ದಾರಿಯಾಗಿರುವುದರಿಂದ ನಿರಂತರವಾಗಿ ಭಾರಿ ವಾಹನಗಳ ಓಡಾಟ ಹೆಚ್ಚಿದ್ದು, ಜಂಕ್ಷನ್‌ಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದರಿಂದ ಶಾಲಾ ಮಕ್ಕಳು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಳ್ಳುತ್ತಿದ್ದರು. ಶಾಲಾ ಮಕ್ಕಳ ಪರದಾಟ ತಪ್ಪಿಸಲು ಇದೀಗ ಟ್ರಾಫಿಕ್ ಪೊಲೀಸರು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಸಾರ್ವಜನಿಕರು ಹಾಗೂ ಪೋಷಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್ ಸಂಚಾರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಭಾಗದಲ್ಲಿ ರಸ್ತೆ ಅಗಲೀಕರಣ ಪೂರ್ಣಗೊಂಡು ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಬರುವವರೆಗೆ ಈ ಇದೇ ನಿಯಮಗಳು ಜಾರಿಯಲ್ಲಿರಲಿವೆ.

