ಬೆಂಗಳೂರು ನಗರಕ್ಕೆ ಬರಲಿದೆ ಇ-ಹಾಲು ಡೆಲಿವರಿ ಹಾಲು ವಾಹನಗಳು. ಈ ಕುರಿತು ಬೆಂಗಳೂರು ಸಹಕಾರ ಹಾಲು ಒಕ್ಕೂಟ (ನಿ) ಅಧ್ಯಕ್ಷ ಡಿ.ಕೆ.ಸುರೇಶ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ವಾಹನದ ಚಿತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ.
ಇ-ಹಾಲು ಡೆಲಿವರಿ ವಾಹನಗಳಿಂದ ತಾಜಾತನ ಸಂರಕ್ಷಣೆ ಆಗಲಿದೆ. ಬಮೂಲ್ ಕೇಂದ್ರ ಕಚೇರಿಯಲ್ಲಿ ಒಕ್ಕೂಟದ ಅಧಿಕೃತ ಮಾರಾಟಗಾರರಿಗೆ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲು ಮತ್ತು ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಲು ಅನುಕೂಲವಾಗುವ ಹಿತದೃಷ್ಟಿಯಿಂದ ವಿನ್ಯಾಸಗೊಳಿಸಲಾದ ಇ-ಹಾಲು ವಾಹನದ ಮಾದರಿಯನ್ನು ಪರೀಕ್ಷಾರ್ಥವಾಗಿ ಪರಿಶೀಲಿಸಿದೆ ಎಂದು ಹೇಳಿದ್ದಾರೆ.
ಇ-ಹಾಲು ಡೆಲಿವರಿ ವಾಹನಗಳು (EVs) PUF ಇನ್ಸುಲೇಟೆಡ್ ಕಂಟೈನರ್ ಮತ್ತು ರೆಫ್ರಿಜರೇಟೆಡ್ ಸೌಲಭ್ಯಗಳನ್ನು ಹೊಂದಿವೆ. ಇದು ಹಾಲಿನ ತಾಜಾತನವನ್ನು ಕಾಪಾಡುತ್ತವೆ. ಪರಿಸರ ಸ್ನೇಹಿ ಆಗಿ ಕಾರ್ಯನಿರ್ವಹಿಸುವುದರ ಜೊತೆಗೆ ಜಿಪಿಎಸ್ ಟ್ರ್ಯಾಕಿಂಗ್ ಸೌಲಭ್ಯವನ್ನು ಹೊಂದಿವೆ ಎಂದು ಡಿ.ಕೆ.ಸುರೇಶ್ ಮಾಹಿತಿ ನೀಡಿದ್ದಾರೆ.
ಇದರಿಂದ ನಿಖರವಾದ ಸಮಯಕ್ಕೆ ಹಾಲಿನ ಉತ್ಪನ್ನಗಳನ್ನು ಡೆಲಿವರಿ ಮಾಡಬಹುದು. ಜೊತೆಗೆ ಹಾಲು ಉತ್ಪನ್ನಗಳ ಮಾರಾಟಗಾರರಿಗೆ ಹಾಗೂ ಸರಬರಾಜುದಾರರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

