ಬಳ್ಳಾರಿಯಲ್ಲಿ ಬ್ಯಾನರ್ ತೆರವು ವಿಚಾರಕ್ಕೆ ಉಂಟಾದ ಗಲಭೆ ಕುರಿತು ಅವಲೋಕಿಸಲು ಕಾಂಗ್ರೆಸ್ ಸತ್ಯಶೋಧನಾ ಸಮಿತಿಯನ್ನು ರಚಿಸಿತ್ತು. ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಬಳ್ಳಾರಿಗೆ ಭೇಟಿ ನೀಡಿದ್ದರು.
ಗಲಭೆಯಲ್ಲಿ ಸಾವನ್ನಪ್ಪಿದ ರಾಜಶೇಖರ್ ರೆಡ್ಡಿ ನಿವಾಸಕ್ಕೆ ಇಂದು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಅಗಲಿಕೆ ನನಗೆ ತೀವ್ರ ನೋವು ತಂದಿದೆ. ನಮ್ಮ ಪಕ್ಷ ರಾಜಶೇಖರ್ ಅವರ ಕುಟುಂಬದೊಂದಿಗೆ ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಳ್ಳಾರಿಯ ಗಲಭೆ, ರಾಜಶೇಖರ್ ರೆಡ್ಡಿ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಬಳ್ಳಾರಿಯ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಬಳ್ಳಾರಿ ಜಿಲ್ಲೆಯ ಶಾಸಕರು ಮತ್ತು ಸಂಸದರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ ಗಲಭೆಯ ಕುರಿತು ಮಾಹಿತಿಯನ್ನು ಡಿ.ಕೆ.ಶಿವಕುಮಾರ್ ಪಡೆರು.
ತಪ್ಪು ಯಾರೇ ಮಾಡಿದ್ದರೂ ಕಾನೂನು ಕ್ರಮ: ಬಳಿಕ ಬಳ್ಳಾರಿ ಕಾಂಗ್ರೆಸ್ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿಯನ್ನು ನಡೆಸಿದರು. “ವಾಲ್ಮೀಕಿ ಅವರ ಪ್ರತಿಮೆ ನಿರ್ಮಾಣ ಹಾಗೂ ಅದಕ್ಕೆ ಜನರಿಂದ ಸಿಗುತ್ತಿರುವ ಸ್ವಾಗತ ಸಹಿಸಲಾಗದೆ ಅಸೂಯೆಯಿಂದ ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದೇ ಈ ದುರ್ಘಟನೆಗೆ ಕಾರಣ ಎಂದು ಸತ್ಯಶೋಧನಾ ಸಮಿತಿ ನಮಗೆ ಮಾಹಿತಿ ನೀಡಿದೆ” ಎಂದರು.
“ಸ್ಥಳೀಯ ನಾಯಕರು ಇಲ್ಲಿ ಪುತ್ಥಳಿ ಆಗಬೇಕು ಎಂದು ಕೈಗೊಂಡಿರುವ ತೀರ್ಮಾನ ಸರಿಯಾಗಿದೆ. ಡಿ.24 ರಿಂದ ಡಿ.29 ರವರೆಗೆ ಈ ಜಿಲ್ಲೆಯ ಜನ ಬಹಳ ಸಂಭ್ರಮದಿಂದ ಪುತ್ಥಳಿ ಸ್ವಾಗತ ಕಾರ್ಯಕ್ರಮವನ್ನು ಹಬ್ಬದಂತೆ ಸಂಭ್ರಮಿಸಿದ್ದರು” ಎಂದು ಹೇಳಿದರು.
“ಈಗ ಕೇವಲ ಬ್ಯಾನರ್ ವಿಚಾರವಾಗಿ ಗಲಾಟೆ ನಡೆದಿದೆ. ಜ.1 ರಂದು ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಕಟ್ಟಿದ್ದಾರೆ. ಬ್ಯಾನರ್ ಕಟ್ಟುವ ವಿಚಾರದಲ್ಲಿ ಜನಾರ್ದನ ರೆಡ್ಡಿ ಅಥವಾ ಶ್ರೀರಾಮುಲು ಅವರಿಗೆ ಅಸಮಾಧಾನವಿದ್ದಿದ್ದರೆ, ಪಾಲಿಕೆ ಆಯುಕ್ತರು, ಪೊಲೀಸ್ ಅಧಿಕಾರಿಗಳು, ಶಾಸಕರು, ಇತರೆ ನಾಯಕರಿಗೆ ಕರೆ ಮಾಡಿ, ಬ್ಯಾನರ್ ತೆಗೆಯಿರಿ ಎಂದಿದ್ದರೆ ಅವರು ತೆರವು ಮಾಡುತ್ತಿದ್ದರು” ಎಂದು ತಿಳಿಸಿದರು.
“ಆದರೆ ಅವರು ಯಾರಿಗೂ ಸೂಚನೆ ನೀಡಿಲ್ಲ. ಬದಲಿಗೆ ವಾಲ್ಮೀಕಿ ಅವರಿಗೆ ಅಪಮಾನವಾಗುವ ರೀತಿ ಬ್ಯಾನರ್ ತೆರವುಗೊಳಿಸಿದ್ದಾರೆ. ನಮ್ಮ ಕಾರ್ಯಕರ್ತರು ಮತ್ತೆ ಬ್ಯಾನರ್ ಹಾಕಲು ಹೋಗಿದ್ದಾರೆ. ನಂತರದ ಘಟನೆಗಳನ್ನು ನಾನು ನೋಡಿದ್ದೇನೆ. ಅವರ ಮುಖಂಡತ್ವದಲ್ಲೇ ಬ್ಯಾನರ್ ಹರಿದುಹಾಕಿದ್ದಾರೆ. ಇದು ಸರಿಯೋ ತಪ್ಪೋ ಎಂದು ನಾನು ತೀರ್ಮಾನ ಮಾಡುವುದಿಲ್ಲ, ನೀವುಗಳೇ ತೀರ್ಮಾನ ಮಾಡಿ” ಎಂದರು.
“ನಾನು ಯಾರ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ನೀಡಲು ಇಲ್ಲಿಗೆ ಬಂದಿಲ್ಲ. ಕಾನೂನು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಪೊಲೀಸ್ ಅಧಿಕಾರಿಗಳು ಬಹಳ ದಿಟ್ಟವಾಗಿ ಅಗತ್ಯ ತೀರ್ಮಾನ ತೆಗೆದುಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ನಡೆ ಸರಿ ಎಂದು ನಾನು ಹೇಳುವುದಿಲ್ಲ. ಕಾನೂನು ಸೂಕ್ತ ಕ್ರಮ ಕೈಗೊಳ್ಳಲಿದೆ. ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟವರನ್ನು ಬಂಧಿಸಿದ್ದಾರೆ, ಖಾಸಗಿ ಭದ್ರತಾ ಸಿಬ್ಬಂದಿ ಹೊಂದಿರುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ” ಎಂದು ಡಿಸಿಎಂ ತಿಳಿಸಿದರು.
“ಈ ಅಹಿತಕರ ಘಟನೆ ಆಗಬಾರದಿತ್ತು. ನಾನು ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಬಳ್ಳಾರಿ ಇತಿಹಾಸ ದೊಡ್ಡದಿದೆ. ದಯವಿಟ್ಟು ಇದರ ಗೌರವಕ್ಕೆ ಧಕ್ಕೆ ಬರುವ ರೀತಿ ನಡೆದುಕೊಳ್ಳಬೇಡಿ. ನಾನು ನಮ್ಮವರಿಗೆ ಬುದ್ಧಿವಾದ ಹೇಳಿದ್ದು, ಮುಂದೆಯೂ ಹೇಳುತ್ತೇನೆ. ಬಿಜೆಪಿಯವರಿಗೆ ಅವರ ನಾಯಕರು ಬಹಳ ದೊಡ್ಡವರಿದ್ದಾರೆ, ಅವರಿಗೆ ಬಿಡುತ್ತೇನೆ” ಎಂದರು.
“ಮೃತ ಕಾರ್ಯಕರ್ತನ ಕುಟುಂಬದ ಜೊತೆ ಪಕ್ಷವಿದೆ. ಕಾನೂನು ಚೌಕಟ್ಟಿನಲ್ಲಿ ಮೃತ ಕಾರ್ಯಕರ್ತನ ಕುಟುಂಬಕ್ಕೆ ಪಕ್ಷದಿಂದ ನೆರವು ಹಾಗೂ ಸರ್ಕಾರಿ ಕೆಲಸ ನೀಡುವ ಬಗ್ಗೆ ಆಲೋಚನೆ ಮಾಡಲಾಗುವುದು. ಈ ಹಿಂದೆ ಯಾವ ತೀರ್ಮಾನ ಆಗಿದೆ ಎಂದು ನೋಡಬೇಕಿದೆ” ಎಂದು ಹೇಳಿದರು.

