ಅತಿ ಕಿರಿಯ ವಯಸ್ಸಿಗೆ ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡಿ, ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿ ಹಲವಾರು ದಾಖಲೆಗಳನ್ನು ಬರೆದು ವಿಶ್ವದಾದ್ಯಂತ ಹೆಸರು ಮಾಡಿರುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಮತ್ತೊಂದು ಗೌರವ ಲಭಿಸಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಬಾಲ ಪ್ರಶಸ್ತಿಯನ್ನು ವೈಭವ್ ಸೂರ್ಯವಂಶಿಗೆ ಪ್ರದಾನ ಮಾಡಿದ್ದಾರೆ. ವೈಭವ್ ಸೂರ್ಯವಂಶಿಗೆ ಸಿಕ್ಕ ಈ ಗೌರವಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳು ವ್ಯಕ್ತವಾಗಿವೆ.
ಪ್ರತಿ ವರ್ಷ ಕೇಂದ್ರ ಮಕ್ಕಳ ಹಾಗೂ ಮಹಿಳಾ ಅಭಿವೃದ್ಧಿ ಸಚಿವಾಲಯ ಕ್ರೀಡೆ, ಕಲೆ, ಸಂಸ್ಕೃತಿ, ಸಮಾಜ ಸೇವೆ, ನಾವೀನ್ಯತೆ ಹಾಗೂ ಶೌರ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 13ರಿಂದ 18ರವರೆಗಿನ ಮಕ್ಕಳಿಗೆ ಈ ಪ್ರಶಸ್ತಿಯನ್ನು ನೀಡಲಿದೆ.
14 ವರ್ಷದ ವೈಭವ್ ಸೂರ್ಯವಂಶಿ ಬಿಹಾರದ ಸಮಸ್ತಿಪುರದವರಾಗಿದ್ದು, ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿದು 7 ಪಂದ್ಯಗಳನ್ನಾಡಿ ಒಂದು ಶತಕ ಹಾಗೂ ಒಂದು ಅರ್ಧಶತಕ ಸಹಿತ 252 ರನ್ ಬಾರಿಸಿದ್ದಾರೆ. ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮೊನ್ನೆಯಷ್ಟೇ ಬಿಹಾರದ ಪರ 84 ಎಸೆತಗಳಲ್ಲಿ ಬರೋಬ್ಬರಿ 190 ರನ್ ಬಾರಿಸಿ ಅತಿಕಡಿಮೆ ಎಸೆತದಲ್ಲಿ ಲಿಸ್ಟ್ ಎ ಕ್ರಿಕೆಟ್ನಲ್ಲಿ 150 ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದು ಎಬಿ ಡಿವಿಲಿಯರ್ಸ್ ದಾಖಲೆಯನ್ನು ಮುರಿದಿದ್ದರು.
ಎಬಿ ಡಿವಿಲಿಯರ್ಸ್ 64 ಎಸೆತಗಳಲ್ಲಿ 150 ರನ್ ಬಾರಿಸಿದ್ದರು. ಆದರೆ ವೈಭವ್ ಸೂರ್ಯವಂಶಿ ಕೇವಲ 59 ಎಸೆತಗಳಲ್ಲಿ 150 ರನ್ ಬಾರಿಸಿ ವಿಶ್ವ ದಾಖಲೆ ಬರೆದರು.

