ಬಾಗಲಕೋಟೆ: ಇಟ್ಟಿಗೆ ಭಟ್ಟಿಯಲ್ಲಿ ಜೀತಕ್ಕೆ ಇಟ್ಟುಕೊಂಡಿದ್ದ ಐವರು ಬಾಲ ಕಾರ್ಮಿಕರು ಸೇರಿದಂತೆ ಒಟ್ಟು 24 ಜನರನ್ನು ರಕ್ಷಣೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ನಡೆದಿದೆ.
ಇಳಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದ ಇಟ್ಟಿಗೆ ಭಟ್ಟಿಯ ಮೇಲೆ ಇಳಕಲ್ ತಹಶೀಲ್ದಾರ್, ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಐವರು ಬಾಲ ಕಾರ್ಮಿಕರು ಸೇರಿದಂತೆ 24 ಜನರನ್ನು ರಕ್ಷಿಸಿದ್ದಾರೆ. ಎಲ್ಲರೂ ಒಡಿಶಾ ಮೂಲದವರು ಎಂದು ತಿಳಿದುಬಂದಿದೆ.
ಈರಪ್ಪ ಕುಂಬಾರ ಎಂಬುವರ ಇಟ್ಟಿಗೆ ಭಟ್ಟಿಯಲ್ಲಿ ಇವರು ಕೆಲಸ ಮಾಡುತ್ತಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಬಾಲ ಕಾರ್ಮಿಕ ನಿಷೇಧ ಮತ್ತು ಜೀತ ಪದ್ಧತಿ ನಿಷೇಧ ಕಾಯ್ದೆಯಡಿ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ಇಟ್ಟಿಗೆ ಭಟ್ಟಿಯಲ್ಲಿ ಜೀತದಾಳುಗಳಾಗಿ ಹಲವರು ದುಡಿಯುತ್ತಿದ್ದಾರೆ ಎಂಬ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಬಂದಿದ್ದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಕಾರ್ಯಾಚರಣೆ ನಡೆಸಿ್ದ್ದರು. ಒತ್ತೆಯಾಳುಗಳಾಗಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಿ, ಅವರನ್ನು ಮರಳಿ ಒಡಿಶಾಗೆ ಕಳುಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

