ಬಾಗಲಕೋಟೆ ಉಪ ಚುನಾವಣೆ ಕಣ ಅಂತಿಮವಾಗಿದೆ. ಏಪ್ರಿಲ್ 9ರಂದು ನಡೆಯಲಿರುವ ಚುನಾವಣೆಗೆ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೇ 4ರಂದು ಉಪ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ಎಚ್.ವೈ.ಮೇಟಿ ನಿಧನದ ಕಾರಣ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಉಪ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಗುರುವಾರ ಅಂತಿಮ ದಿನವಾಗಿತ್ತು. ನಾಲ್ವರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಉತ್ತಮ ಪ್ರಜಾಕೀಯ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಗಳು, ಪಕ್ಷೇತರರು ಸೇರಿ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣಾ ಆಯೋಗ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡಿದೆ.
ಕಣದಲ್ಲಿರುವ ಅಭ್ಯರ್ಥಿಗಳು
- ಉಮೇಶ ಹುಲ್ಲಪ್ಪ ಮೇಟಿ – ಕಾಂಗ್ರೆಸ್
- ಚರಂತಿಮಠ ವೀರಭದ್ರಯ್ಯ (ವೀರಣ್ಣ) – ಬಿಜೆಪಿ
- ಅಂತೋಷ ಸವ್ವಾಸೆ – ಉತ್ತಮ ಪ್ರಜಾಕೀಯ ಪಾರ್ಟಿ
- ತೇಜೋರಾಮ ಶೆಟ್ಟಿ ದೇವಾಂಗ – ಜನತಾ ಚಳುವಳಿ ಭಾರತ
- ನಾಗರಾಜ.ಶಿ.ಕಲಕುಟಗರ – ಕರ್ನಾಟಕ ರಾಷ್ಟ್ರ ಸಮಿತಿ
- ತಳವಾರ ಶಿವಕುಮಾರ್ – ಬ್ಲೂ ಇಂಡಿಯಾ ಪಾರ್ಟಿ
- ಸಿದ್ದಪ್ಪ ಗೋಡಿ – ಆಲ್ ಇಂಡಿಯಾ ಜನರಕ್ಷ ಪಾರ್ಟಿ
- ಆನಂದ ಜಕಾತಿ – ಪಕ್ಷೇತರ
- ರವಿ ಶಿವಪ್ಪ ಪಡಸಲಗಿ – ಪಕ್ಷೇತರ
ಬಾಗಲಕೋಟೆ ಚುನಾವಣೆ ಎಂದರೆ ಅದು ಕಾಂಗ್ರೆಸ್‌ನ ಎಚ್.ವೈ.ಮೇಟಿ ಮತ್ತು ಬಿಜೆಪಿಯ ವೀರಣ್ಣ ಚರಂತಿಮಠ ನಡುವಿನ ಹೋರಾಟ. ಆದರೆ ಈಗ ಎಚ್.ವೈ.ಮೇಟಿ ಪುತ್ರ ಉಮೇಶ್ ಮೇಟಿ ವೀರಣ್ಣ ಚರಂತಿಮಠ ಎದುರಾಳಿಯಾಗಿದ್ದಾರೆ.
ಮಾಜಿ ಸಚಿವ ಎಚ್.ವೈ.ಮೇಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರು. ಆದ್ದರಿಂದ ಬಾಗಲಕೋಟೆ ಉಪ ಚುನಾವಣೆ ಗೆಲ್ಲುವುದು ಸಿದ್ದರಾಮಯ್ಯ ಪಾಲಿಗೆ ಪ್ರತಿಷ್ಠೆಯಾಗಿದೆ. ಕ್ಷೇತ್ರದಲ್ಲಿ 4 ದಿನ ಪ್ರಚಾರ ನಡೆಸುತ್ತೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ವೀರಣ್ಣ ಚರಂತಿಮಠ ಅವರನ್ನು ಈ ಬಾರಿ ಗೆಲ್ಲಿಸಬೇಕು ಎಂದು ಬಿರುಸಿನ ಪ್ರಚಾರವನ್ನು ನಡೆಸುತ್ತಿದೆ. ಬೇರೆ ಬೇರೆ ಜಿಲ್ಲೆಯ ಹಲವು ನಾಯಕರು ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಆಗಮಿಸಿದ್ದಾರೆ.

