ಕನ್ನಡ ಚಿತ್ರರಂಗ ಈ ವರ್ಷ ಚಿತ್ರಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿದೆ ಎನ್ನಬಹುದು. ಈ ವರ್ಷ ಬಿಡುಗಡೆಯಾದ ಕನ್ನಡ ಚಿತ್ರಗಳ ಪೈಕಿ ಬಾಕ್ಸ್ ಆಫೀಸ್ ಹಾಗೂ ಪ್ರೇಕ್ಷಕರಿಗೆ ಇಷ್ಟವಾಗುವುದು ಈ ಎರಡರಲ್ಲೂ ಗೆದ್ದ ಚಿತ್ರ ಯಾವುದು ಎಂಬ ಪ್ರಶ್ನೆ ಎದುರಾದರೆ ಅದಕ್ಕೆ ಉತ್ತರ ಬರೀ ಮೌನವೇ.
ಅಷ್ಟರ ಮಟ್ಟಿಗೆ ಕನ್ನಡ ಚಿತ್ರರಂಗ ಜನರನ್ನು ಇಷ್ಟಪಡಿಸುವುದರಲ್ಲಿ ಹಾಗೂ ತಲುಪುವುದರಲ್ಲೂ ಸಹ ವಿಫಲವಾಗಿವೆ. ಈ ಹಿಂದೆ ಹೌಸ್ಫುಲ್ ಬೋರ್ಡ್ಗಳೊಂದಿಗೆ ಪ್ರದರ್ಶನ ಕಾಣುತ್ತಿದ್ದ ಕನ್ನಡ ಚಿತ್ರಗಳು ಮತ್ತೆ ಅದೇ ರೀತಿ ಆಗುವುದು ಯಾವಾಗ ಎಂಬ ಪ್ರಶ್ನೆ ಎದ್ದಿರುವಾಗಲೇ ತಮ್ಮ ಕಳಪೆ ಮೇಕಿಂಗ್ ಹಾಗೂ ಔಟ್ಪುಟ್ಗಳಿಂದ ಕೆಲ ಕನ್ನಡ ಚಿತ್ರಗಳು ಚಿತ್ರಮಂದಿರಕ್ಕೆ ಬರಬೇಕೆಂಬ ಆಸೆಯುಳ್ಳ ಪ್ರೇಕ್ಷಕನ ಆಸೆಯನ್ನೇ ಕೊಲ್ಲತೊಡಗಿವೆ.
ಇದೀಗ ಅಂತಹದ್ದೇ ಸಾಲಿಗೆ ಅಯೋಗ್ಯ 2 ಚಿತ್ರ ಸಹ ಸೇರುತ್ತಿದೆ ಎಂದು ನಾವು ಹೇಳುತ್ತಿಲ್ಲ, ಪ್ರೇಕ್ಷಕರೇ ದೊಡ್ಡ ಸಂಖ್ಯೆಯಲ್ಲಿ ಎಕ್ಸ್ನಲ್ಲಿ ಟ್ವೀಟ್ ಮಾಡಿ ಟೀಕೆ ಮಾಡತೊಡಗಿದ್ದಾರೆ. ಹೌದು, ಚಿತ್ರದ ‘ಮುದ್ ಮುದ್ದು ಪುಟ್ಲಕ್ಷ್ಮಿ’ ಎಂಬ ವಿಡಿಯೊ ಹಾಡನ್ನು ಚಿತ್ರತಂಡ ಇತ್ತೀಚೆಗಷ್ಟೆ ಬಿಡುಗಡೆ ಮಾಡಿತ್ತು.
ಈ ಹಾಡಿನ ತುಣುಕನ್ನು ಆಡಿಯೊ ಹಕ್ಕು ಖರೀದಿಸಿರುವ ಆನಂದ್ ಆಡಿಯೊ ಸಂಸ್ಥೆ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತು. ಇದಕ್ಕೆ ನೂರಾರು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ನೃತ್ಯ ಸಂಯೋಜನೆಯನ್ನು ಕಂಡು ಕಂಗಾಲಾಗಿದ್ದಾರೆ. ಅಲ್ಲದೇ ಹಾಡಿನ ಸಾಹಿತ್ಯ , ಸೆಟ್ಗಳು, ಲೊಕೇಷನ್, ಸಂಗೀತ ಎಲ್ಲವೂ ಸಹ ಇನ್ನೂ 2010ರ ಸಮಯದಲ್ಲಿದ್ದ ಹಾಗಿವೆ ಎಂದು ಕಿಡಿಕಾರಿದ್ದಾರೆ.
ಕನ್ನಡದ ಸೀರಿಯಲ್ಗಳ ಹಾಡುಗಳೇ ಈ ಹಾಡಿಗಿಂತ ಚೆನ್ನಾಗಿವೆ ಎಂದು ಟೀಕಿಸಿರುವ ನೆಟ್ಟಿಗರು ಈ ರೀತಿ ಪ್ರೇಕ್ಷಕರ ಆಸಕ್ತಿ ಕುಗ್ಗಿಸುವ ಹಾಡುಗಳನ್ನು ಮಾಡಿದರೆ ಚಿತ್ರವನ್ನು ಒಟಿಟಿಯಲ್ಲೂ ಸಹ ನೋಡುವುದಿಲ್ಲ ಎಂದು ಕಾಮೆಂಟ್ ಮಾಡಿ ಟ್ರೋಲ್ ಮಾಡಿ ಒಳ್ಳೆಯ ಚಿತ್ರಗಳನ್ನು ಮಾಡಿ ಎಂದು ಸಲಹೆ ನೀಡಿದ್ದಾರೆ.

