HomeLatest NewsBIG NEWS : 'ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ ; KGID ದಾಖಲೆಗಳ ತಿದ್ದುಪಡಿಗೆ...

BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ ; KGID ದಾಖಲೆಗಳ ತಿದ್ದುಪಡಿಗೆ ವಿಮಾ ಇಲಾಖೆ ಸೂಚನೆ |Govt Employee

ಬೆಂಗಳೂರು: ಕರ್ನಾಟಕ ಸರ್ಕಾರಿ ವಿಮಾ ಇಲಾಖೆ (KGID) ತನ್ನ ಆನ್‌ಲೈನ್ ತಂತ್ರಾಂಶದಲ್ಲಿರುವ ಜೀವ ವಿಮಾ ಪಾಲಿಸಿ ದತ್ತಾಂಶದಲ್ಲಿನ ದೋಷಗಳನ್ನು ಸರಿಪಡಿಸಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನಿರ್ದೇಶಕಿ ಅನ್ನಪೂರ್ಣ ಕೆ. ಅವರು ಜುಲೈ 13, 2026ರಂದು ಸುತ್ತೋಲೆ-04/2026-27 ಹೊರಡಿಸಿದ್ದು, ರಾಜ್ಯದ ಸರ್ಕಾರಿ ನೌಕರರ ಜೀವ ವಿಮಾ ಪಾಲಿಸಿ ಮಾಹಿತಿಯನ್ನು ತ್ವರಿತವಾಗಿ ಪರಿಶೀಲಿಸಿ ತಿದ್ದುಪಡಿ ಮಾಡುವಂತೆ ಎಲ್ಲಾ ಜಿಲ್ಲಾ ವಿಮಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಮಾ ಇಲಾಖೆಯ ಪರಿಶೀಲನೆಯಲ್ಲಿ ಒಟ್ಟು 4,732 ಪ್ರಕರಣಗಳಲ್ಲಿ ವಿವಿಧ ರೀತಿಯ ದತ್ತಾಂಶದ ದೋಷಗಳು ಪತ್ತೆಯಾಗಿದ್ದು, ಅವುಗಳನ್ನು ಹಂತ ಹಂತವಾಗಿ ಸರಿಪಡಿಸಲು ಪ್ರಮಾಣಿತ ಕಾರ್ಯವಿಧಾನ (SOP) ಪ್ರಕಟಿಸಲಾಗಿದೆ.

ಪತ್ತೆಯಾದ ಪ್ರಮುಖ ದೋಷಗಳು

  • 1,062 ಪ್ರಕರಣಗಳಲ್ಲಿ HRMS ತಂತ್ರಾಂಶದಲ್ಲಿ ಪ್ರಥಮ KGID ಪಾಲಿಸಿ ಸಂಖ್ಯೆ ತಪ್ಪಾಗಿ ದಾಖಲಾಗಿರುವುದು.
  • 503 ಪ್ರಕರಣಗಳಲ್ಲಿ HRMS ಮತ್ತು KGID ತಂತ್ರಾಂಶಗಳಲ್ಲಿನ ನೌಕರರ ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದಿರುವುದು.
  • 205 ಪ್ರಕರಣಗಳಲ್ಲಿ ಜನ್ಮದಿನಾಂಕದ ಮಾಹಿತಿ ಹೊಂದಿಕೆಯಾಗದಿರುವುದು.
  • 1,962 ಪ್ರಕರಣಗಳಲ್ಲಿ HRMSನಲ್ಲಿ ಇರುವ KGID ಸಂಖ್ಯೆ, KGID ದತ್ತಾಂಶದಲ್ಲಿ ಲಭ್ಯವಿಲ್ಲದಿರುವುದು.

ಯಾವ ಕ್ರಮ ಕೈಗೊಳ್ಳಬೇಕು?

ವಿಮಾ ಇಲಾಖೆ ಸಂಬಂಧಿತ ಜಿಲ್ಲಾ ಕಚೇರಿಗಳು, ಮೇಲಧಿಕಾರಿಗಳು ಹಾಗೂ ವೇತನ ಬಟವಾಡೆ ಅಧಿಕಾರಿಗಳ (DDO) ಮೂಲಕ ನೌಕರರನ್ನು ಸಂಪರ್ಕಿಸಿ ತಪ್ಪು ಮಾಹಿತಿಯನ್ನು ಸರಿಪಡಿಸಲು ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಪ್ರಥಮ ಪಾಲಿಸಿ ಸಂಖ್ಯೆ ತಪ್ಪಿದ್ದರೆ DDO ಮೂಲಕ ತಿದ್ದುಪಡಿ ಮಾಡಬೇಕು.
  • ಸಾಧ್ಯವಾಗದಿದ್ದರೆ ನಿಖರ ಮಾಹಿತಿಯನ್ನು Excel ಶೀಟ್ ಹಾಗೂ ಪೂರಕ ದಾಖಲೆಗಳೊಂದಿಗೆ ವಿಮಾ ನಿರ್ದೇಶನಾಲಯಕ್ಕೆ ಇ-ಮೇಲ್ ಮೂಲಕ ಕಳುಹಿಸಬೇಕು.
  • ಹೆಸರು ಹಾಗೂ ಜನ್ಮದಿನಾಂಕದ ವ್ಯತ್ಯಾಸಗಳಿದ್ದರೆ ಭೌತಿಕ ಪಾಲಿಸಿ ದಾಖಲೆಗಳನ್ನು ಪರಿಶೀಲಿಸಿ ದೃಢೀಕರಣದೊಂದಿಗೆ ಮಾಹಿತಿ ಸಲ್ಲಿಸಬೇಕು.
  • ಜನ್ಮದಿನಾಂಕ ಬದಲಾವಣೆಯಿಂದ ವಿಮಾ ಮೊತ್ತದಲ್ಲಿ ವ್ಯತ್ಯಾಸವಾದರೆ ಮರುಲೆಕ್ಕಾಚಾರ ಮಾಡಿ Data Verification Portalನಲ್ಲಿ ತಿದ್ದುಪಡಿ ಮಾಡಬೇಕು.
  • HRMSನಲ್ಲಿ ಮಾತ್ರ ದಾಖಲಾಗಿರುವ KGID ಸಂಖ್ಯೆಗಳಿಗೆ ಸಂಬಂಧಿಸಿದ ಪಾಲಿಸಿಗಳನ್ನು ಪ್ರಥಮ ಪಾಲಿಸಿಗೆ ಲಿಂಕ್ ಮಾಡಿ ಅಥವಾ ಹೊಸದಾಗಿ ದತ್ತಾಂಶ ಪರಿಶೀಲನೆ ನಡೆಸಬೇಕು.

ಅಧಿಕಾರಿಗಳಿಗೆ ಸೂಚನೆ

ಜಿಲ್ಲಾ ವಿಮಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳು ಶೀಘ್ರ ಸಂಪರ್ಕ ಮಾರ್ಗದ ಮೂಲಕ ನೌಕರರನ್ನು ಸಂಪರ್ಕಿಸಿ, ಭೌತಿಕ ದಾಖಲೆಗಳ ಪರಿಶೀಲನೆ ನಡೆಸಿ, ಅಗತ್ಯ ದಾಖಲೆಗಳೊಂದಿಗೆ ಮಾಹಿತಿಯನ್ನು ವಿಮಾ ನಿರ್ದೇಶನಾಲಯದ ಗಣಕ ವಿಭಾಗಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಕ್ರಮದಿಂದ KGID ಆನ್‌ಲೈನ್ ತಂತ್ರಾಂಶದಲ್ಲಿನ ದತ್ತಾಂಶವನ್ನು ನಿಖರಗೊಳಿಸಿ, ಸರ್ಕಾರಿ ನೌಕರರ ಜೀವ ವಿಮಾ ಪಾಲಿಸಿಗಳ ಮಾಹಿತಿಯಲ್ಲಿ ಇರುವ ಗೊಂದಲಗಳನ್ನು ನಿವಾರಿಸುವುದು ಇಲಾಖೆಯ ಉದ್ದೇಶವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular