ಬೆಂಗಳೂರು: ನಮ್ಮ ಮೆಟ್ರೋ ಹಳಿಗೆ ಜಿಗಿದು ಪ್ರಯಾಣಿಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಹಳದಿ ಮಾರ್ಗದ (ಯೆಲ್ಲೋ ಲೈನ್) ಹುಸ್ಕೂರ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿ–ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕನೊಬ್ಬ ಏಕಾಏಕಿ ಮೆಟ್ರೋ ಹಳಿಗೆ ಜಿಗಿದಿದ್ದಾನೆ. ಸ್ಥಳದಲ್ಲಿದ್ದ ಮೆಟ್ರೋ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಸಮಯಪ್ರಜ್ಞೆಯಿಂದ ಕಾರ್ಯಾಚರಣೆ ನಡೆಸಿದ ಪರಿಣಾಮ ದೊಡ್ಡ ದುರಂತ ತಪ್ಪಿದೆ.ಕೂಡಲೇ ಸಿಬ್ಬಂದಿಗಳು ಅಲರ್ಟ್ ಆಗಿ ಪವರ್ ಆಫ್ ಮಾಡಿ ಪ್ರಯಾಣಿಕನನ್ನು ರಕ್ಷಿಸಿದ್ದಾರೆ.ಇಂದು ಸಂಜೆ 5:30 ಕ್ಕೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಕೆಲಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಸೇವೆಯನ್ನು ಪುನರಾರಂಭಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರು ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳು ಘಟನೆಯ ಕುರಿತು ಪರಿಶೀಲನೆ ನಡೆಸುತ್ತಿದ್ದು, ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚುತ್ತಿದೆ ಆತ್ಮಹತ್ಯೆ ಯತ್ನ ಪ್ರಕರಣ
ವೇಗವಾದ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿ ಗುರುತಿಸಿಕೊಂಡಿರುವ ನಮ್ಮ ಮೆಟ್ರೋ ಇದೀಗ ಮತ್ತೊಂದು ಆತಂಕಕಾರಿ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ಯತ್ನಗಳು ಹಾಗೂ ಹಳಿಗೆ ಜಿಗಿಯುವ ಘಟನೆಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ.
ಇಂದು ಹಳದಿ ಮಾರ್ಗದ ಹುಸ್ಕೂರ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮೆಟ್ರೋ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ವ್ಯಕ್ತಿಯ ಜೀವ ಉಳಿದಿದ್ದರೂ, ಇಂತಹ ಘಟನೆಗಳು ಮೆಟ್ರೋ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ.
ಏಕೆ ಹೆಚ್ಚುತ್ತಿವೆ ಇಂತಹ ಘಟನೆಗಳು?
ತಜ್ಞರ ಪ್ರಕಾರ ಮಾನಸಿಕ ಒತ್ತಡ, ಖಿನ್ನತೆ, ಕುಟುಂಬದ ಸಮಸ್ಯೆಗಳು, ಆರ್ಥಿಕ ಸಂಕಷ್ಟ, ಉದ್ಯೋಗದ ಅನಿಶ್ಚಿತತೆ ಹಾಗೂ ವೈಯಕ್ತಿಕ ಕಾರಣಗಳು ಆತ್ಮಹತ್ಯೆ ಯತ್ನಗಳಿಗೆ ಪ್ರಮುಖ ಕಾರಣಗಳಾಗಿವೆ. ಜನಸಂದಣಿ ಇರುವ ಸಾರ್ವಜನಿಕ ಸ್ಥಳಗಳನ್ನು ಕೆಲವರು ಆತ್ಮಹತ್ಯೆಗೆ ಆಯ್ಕೆ ಮಾಡುತ್ತಿರುವುದು ಮತ್ತಷ್ಟು ಆತಂಕಕಾರಿ ಬೆಳವಣಿಗೆಯಾಗಿದೆ.
ಸುರಕ್ಷತಾ ಕ್ರಮಗಳ ಅಗತ್ಯ
ಇಂತಹ ಘಟನೆಗಳನ್ನು ತಡೆಯಲು ಮೆಟ್ರೋ ನಿಲ್ದಾಣಗಳಲ್ಲಿ ಸಿಸಿಟಿವಿ ನಿಗಾವನ್ನು ಮತ್ತಷ್ಟು ಬಲಪಡಿಸುವುದು, ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವುದು, ಅನುಮಾನಾಸ್ಪದ ವರ್ತನೆ ಗಮನಿಸಿ ತಕ್ಷಣ ಮಧ್ಯಪ್ರವೇಶಿಸುವ ವ್ಯವಸ್ಥೆ ಹಾಗೂ ಅಗತ್ಯವಿರುವಲ್ಲಿ ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ಗಳಂತಹ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸುವ ಬಗ್ಗೆ ತಜ್ಞರು ಸಲಹೆ ನೀಡುತ್ತಿದ್ದಾರೆ.

