ಬೆಂಗಳೂರು: ಇಂದಿನ ಒತ್ತಡದ ಜೀವನದಲ್ಲಿ ಮನೆಯಲ್ಲಿ ಒಂದು ಪುಟ್ಟ ಸಾಕುಪ್ರಾಣಿ ಇದ್ದರೆ ಆ ಖುಷಿಯೇ ಬೇರೆ. ಪ್ರಾಣಿಗಳೊಂದಿಗೆ ಕಾಲ ಕಳೆಯುವುದರಿಂದ ಕೇವಲ ಮಾನಸಿಕ ನೆಮ್ಮದಿ ಮಾತ್ರವಲ್ಲ, ಜೀವನದಲ್ಲಿ ಭಾವನಾತ್ಮಕ ಬಾಂಧವ್ಯವೂ ಹೆಚ್ಚುತ್ತದೆ. ಆದರೆ, ನಿಮಗೆ ಗೊತ್ತೇ? ಮನೆಯಲ್ಲಿ ಪ್ರಾಣಿಗಳನ್ನು ಸಾಕುವುದು ಕೇವಲ ಹವ್ಯಾಸವಲ್ಲ, ಅದರ ಹಿಂದೆ ಜ್ಯೋತಿಷ್ಯ ಶಾಸ್ತ್ರದ (Astro Tips) ದೊಡ್ಡ ರಹಸ್ಯವೇ ಅಡಗಿದೆ
ಕೆಲವು ನಿರ್ದಿಷ್ಟ ಪ್ರಾಣಿಗಳನ್ನು ಮನೆಯಲ್ಲಿ ಪೋಷಿಸುವುದರಿಂದ ಅದೃಷ್ಟ ಒಲಿಯುತ್ತದೆ, ಧನಲಾಭವಾಗುತ್ತದೆ ಮತ್ತು ಶಾಂತಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆ ನಮ್ಮ ಧಾರ್ಮಿಕ ಗ್ರಂಥಗಳಲ್ಲಿದೆ.
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧ ಅನಾದಿಕಾಲದ್ದು. ಅದಕ್ಕಾಗಿಯೇ ನಾವು ನಾಯಿ, ಬೆಕ್ಕು, ಹಸು, ಕುರಿ ಹೀಗೆ ಹತ್ತಾರು ಪ್ರಾಣಿಗಳನ್ನು ಮನೆಯ ಸದಸ್ಯರಂತೆ ಸಾಕುತ್ತೇವೆ. ಈ ಮೂಕ ಪ್ರಾಣಿಗಳು ನಮ್ಮ ಕುಟುಂಬದ ಅವಿಭಾಜ್ಯ ಅಂಗವಾಗಿಬಿಡುತ್ತವೆ. ಅವುಗಳ ಆಹಾರ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿಯೂ ಹೌದು. ಈ ಕಾಳಜಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 7 ರಂದು ರಾಷ್ಟ್ರೀಯ ಸಾಕುಪ್ರಾಣಿಗಳ ದಿನ (National Pet Day) ವನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ(Astro Tips) ಪ್ರಕಾರ ಯಾವ ಪ್ರಾಣಿಗಳನ್ನು ಸಾಕಿದರೆ ಮನೆಯಲ್ಲಿ ಅದೃಷ್ಟಕರ ಎಂಬುದರ ಬಗ್ಗೆ ತಿಳಿಯೋಣ.
ಮೊಲ
ಶಾಸ್ತ್ರಗಳ ಪ್ರಕಾರ, ಮೊಲವನ್ನು ಮನೆಯಲ್ಲಿ ಸಾಕುವುದು ಅತ್ಯಂತ ಮಂಗಳಕರ ಮತ್ತು ಶುಭಕರ ಎಂದು ಪರಿಗಣಿಸಲಾಗಿದೆ.ಮೊಲವು ಮನೆಯಲ್ಲಿನ ನಕಾರಾತ್ಮಕತೆಯನ್ನು ಹೀರಿಕೊಂಡು, ಇಡೀ ಪರಿಸರದಲ್ಲಿ ಸಕಾರಾತ್ಮಕ ಶಕ್ತಿ (Positive Energy) ಹರಿಯುವಂತೆ ಮಾಡುತ್ತದೆ,ಕುಟುಂಬದ ಸದಸ್ಯರ ನಡುವೆ ಬಾಂಧವ್ಯ ಹದಗೆಡುತ್ತಿದ್ದರೆ, ಮೊಲಗಳನ್ನು ಸಾಕುವುದರಿಂದ ಮನೆಯಲ್ಲಿ ಶಾಂತಿ ಮತ್ತು ಪ್ರೀತಿ ಹೆಚ್ಚುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.ಧರ್ಮಗ್ರಂಥಗಳ ಪ್ರಕಾರ, ಮೊಲವನ್ನು ಅದೃಷ್ಟದ ಪ್ರಾಣಿ ಎಂದು ಕರೆಯಲಾಗುತ್ತದೆ. ಇದನ್ನು ಮನೆಯಲ್ಲಿ ಪ್ರೀತಿಯಿಂದ ಸಾಕುವುದರಿಂದ ಸಂಪತ್ತು ವೃದ್ಧಿಯಾಗಿ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ
ಆಮೆ
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಆಮೆಯನ್ನು ಶ್ರೀಮನ್ನಾರಾಯಣನ ಕೂರ್ಮಾವತಾರದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆಮೆ ಇರುವ ಮನೆಯಲ್ಲಿ ದೇವತೆಗಳ ಆಶೀರ್ವಾದ ಸದಾ ಇರುತ್ತದೆ ಎಂಬ ನಂಬಿಕೆಯಿದೆ.ಯಾರು ಮನೆಯಲ್ಲಿ ಆಮೆಯನ್ನು ಪ್ರೀತಿಯಿಂದ ಪೋಷಿಸುತ್ತಾರೋ, ಅವರಿಗೆ ಸಮಾಜದಲ್ಲಿ ಗೌರವ, ಕೀರ್ತಿ ಮತ್ತು ಪ್ರತಿಷ್ಠೆ ಲಭಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.ಆಮೆಯ ಸುದೀರ್ಘ ಆಯಸ್ಸು ಮತ್ತು ಅದರ ರಕ್ಷಣಾತ್ಮಕ ಗುಣವು ಮನೆಯ ಸದಸ್ಯರಲ್ಲಿ ಆತ್ಮವಿಶ್ವಾಸ ಮತ್ತು ಬದುಕಿನ ಸ್ಥೈರ್ಯವನ್ನು ಹೆಚ್ಚಿಸುತ್ತದೆ.
ಮೀನು
ನಮ್ಮ ಪೂರ್ವಜರು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಸಾಕುವ ಪ್ರಾಣಿ-ಪಕ್ಷಿಗಳು ನಮ್ಮ ಮನೆಯ ವಾಸ್ತು ಮತ್ತು ಅದೃಷ್ಟದ ಮೇಲೆ ನೇರ ಪರಿಣಾಮ ಬೀರುತ್ತವೆ. ಅದರಲ್ಲೂ ಮೀನು ಮತ್ತು ನಾಯಿಯನ್ನು ಸಾಕುವುದರಿಂದ ಸಿಗುವ ಲಾಭಗಳು ಅಪಾರ.ಅನೇಕರ ಮನೆಯಲ್ಲಿ ಅಕ್ವೇರಿಯಂ ಇರುವುದನ್ನು ನೀವು ನೋಡಿರುತ್ತೀರಿ. ಇದು ಕೇವಲ ಶೋಕಿಗಾಗಿ ಅಲ್ಲ, ಇದರ ಹಿಂದೆ ದೊಡ್ಡ ಶಾಸ್ತ್ರವೇ ಇದೆ.
ಮೀನುಗಳನ್ನು ಸಾಕ್ಷಾತ್ ಲಕ್ಷ್ಮೀ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಮೀನುಗಳನ್ನು ಸಾಕುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚುತ್ತದೆ (ಧನಾಗಮನ).
ಅಕ್ವೇರಿಯಂನಲ್ಲಿ ಈಜುವ ಮೀನುಗಳನ್ನು ನೋಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಆರೋಗ್ಯ ವೃದ್ಧಿಸುತ್ತದೆ.
ವಿಶೇಷವಾಗಿ ಗೋಲ್ಡನ್ ಫಿಶ್ (Golden Fish) ಮತ್ತು ಕಪ್ಪು ಬಣ್ಣದ ಮೀನುಗಳು ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೀರಿಕೊಂಡು, ಅದೃಷ್ಟವನ್ನು ತರುತ್ತವೆ ಎಂದು ನಂಬಲಾಗಿದೆ.
ನಾಯಿ (Dog):
ನಾಯಿಯನ್ನು ಮನುಷ್ಯನ ಅತ್ಯುತ್ತಮ ಸ್ನೇಹಿತ ಎನ್ನಲಾಗುತ್ತದೆ. ಆದರೆ ಶ್ವಾನ ಸಾಕಾಣಿಕೆ ಕೇವಲ ಭದ್ರತೆಗೆ ಮಾತ್ರ ಸೀಮಿತವಾಗಿಲ್ಲ.
ದೋಷ ನಿವಾರಣೆ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ನಾಯಿ ಸಾಕುವುದರಿಂದ ಜೀವನದ ಅನೇಕ ಸಂಕಷ್ಟಗಳು ದೂರವಾಗುತ್ತವೆ. ಒಂದು ವೇಳೆ ನಿಮಗೆ ನಾಯಿ ಸಾಕಲು ಸಾಧ್ಯವಾಗದಿದ್ದರೆ ಪ್ರತಿದಿನ ಬೀದಿ ನಾಯಿಗಳಿಗೆ ಆಹಾರ ನೀಡಿದರೂ ಸಹ ಜಾತಕದಲ್ಲಿನ ದೋಷಗಳು ಕಡಿಮೆಯಾಗಿ ಪುಣ್ಯ ಫಲ ಲಭಿಸುತ್ತದೆ.
ನಾಯಿಯನ್ನು ಭೈರವ ದೇವರ ವಾಹನವೆಂದು ನಂಬಲಾಗಿದ್ದು ಇದು ಮನೆಯನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ.ಮನೆಯಲ್ಲಿ ನಾಯಿ ಇದ್ದರೆ ಅಲ್ಲಿ ನಗು ಮತ್ತು ಸಕಾರಾತ್ಮಕತೆ ಸದಾ ತುಂಬಿರುತ್ತದೆ. ಇದು ಮನೆಯ ಸುರಕ್ಷತೆಯ ಜೊತೆಗೆ ನೆಮ್ಮದಿಯನ್ನೂ ನೀಡುತ್ತದೆ.
ಗೋಮಾತೆ
ಹಿಂದೂ ಧರ್ಮದಲ್ಲಿ ಹಸುವನ್ನು ಕೇವಲ ಒಂದು ಪ್ರಾಣಿಯಾಗಿ ನೋಡದೆ, ಗೋಮಾತೆ ಎಂದು ಸಾಕ್ಷಾತ್ ದೇವತೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಹಳ್ಳಿಗಳಲ್ಲಿ ಇಂದಿಗೂ ಮನೆಗೊಂದು ಹಸುವಿರುವುದು ಸಂಪ್ರದಾಯ ಮಾತ್ರವಲ್ಲ ಅದು ಆ ಮನೆಯ ಸಮೃದ್ಧಿಯ ಗುರುತೂ ಹೌದು.ಪುರಾಣಗಳ ಪ್ರಕಾರ, ಹಸುವಿನ ದೇಹದಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ. ಮನೆಯಲ್ಲಿ ಹಸುವನ್ನು ಸಾಕುವುದರಿಂದ ಆ ಇಡೀ ದೈವಿಕ ಶಕ್ತಿ ನಿಮ್ಮ ಮನೆಯನ್ನು ಆವರಿಸುತ್ತದೆ.
ಹಸು ಎನ್ನುವುದು ಪ್ರೀತಿ ಮತ್ತು ತಾಳ್ಮೆಯ ಸಂಕೇತ. ಮನೆಯಲ್ಲಿ ಗೋಮಾತೆಯನ್ನು ಪೋಷಿಸುವುದರಿಂದ ಕುಟುಂಬದ ಸದಸ್ಯರ ನಡುವೆ ಬಾಂಧವ್ಯ ಸುಧಾರಿಸುತ್ತದೆ ಮತ್ತು ಮನಸ್ಥಾಪಗಳು ದೂರವಾಗುತ್ತವೆ.

