ಮಾಟ-ಮಂತ್ರ ಮತ್ತು ಅಘೋರಿ ಆಚರಣೆಗಳ ಹೆಸರಿನಲ್ಲಿ ಮುಗ್ಧ ಮಹಿಳೆಯರನ್ನು ವಂಚಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪ ಹೊತ್ತಿರುವ ಅಶೋಕ್ ಖರಾತ್ ಪ್ರಕರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿವೆ. ಪೊಲೀಸ್ ತನಿಖೆಯ ವೇಳೆ ಆರೋಪಿಗೆ ಸಂಬಂಧಿಸಿದಂತೆ ಎಂಟು ಮಹಿಳೆಯರ ಬರೋಬ್ಬರಿ 35 ಖಾಸಗಿ ಹಾಗೂ ಅಶ್ಲೀಲ ವಿಡಿಯೋ ತುಣುಕುಗಳನ್ನು ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಮೌಢ್ಯ ಹಾಗೂ ಬ್ಲ್ಯಾಕ್ ಮ್ಯಾಜಿಕ್ ನೆಪದಲ್ಲಿ ಮಹಿಳೆಯರನ್ನು ಪುಸಲಾಯಿಸಿ, ಲೈಂಗಿಕವಾಗಿ ಬಳಸಿಕೊಂಡು, ಬಳಿಕ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಗಳು ಈ ಪ್ರಕರಣದಲ್ಲಿ ದಟ್ಟವಾಗಿ ಕೇಳಿಬಂದಿವೆ.
ಎಂಟು ಮಹಿಳೆಯರ 35 ವಿಡಿಯೋಗಳು ಲಭ್ಯ !
ಪೊಲೀಸ್ ಇಲಾಖೆ ನಡೆಸಿರುವ ತನಿಖೆಯ ಪ್ರಕಾರ, ಅಶೋಕ್ ಖರಾತ್ ಸಂಗ್ರಹಿಸಿಟ್ಟುಕೊಂಡಿದ್ದ ಡಿಜಿಟಲ್ ಸಾಧನಗಳಿಂದ ಎಂಟು ಮಹಿಳೆಯರಿಗೆ ಸಂಬಂಧಿಸಿದ ಒಟ್ಟು 35 ವಿಡಿಯೋಗಳನ್ನು ರಿಕವರಿ ಮಾಡಲಾಗಿದೆ. ಈ ವಿಡಿಯೋಗಳನ್ನು ಯಾವ ಸಂದರ್ಭದಲ್ಲಿ ಚಿತ್ರೀಕರಿಸಲಾಯಿತು? ಮಹಿಳೆಯರಿಗೆ ಬೆದರಿಕೆ ಹಾಕಿ, ಒತ್ತಾಯಪೂರ್ವಕವಾಗಿ ಇವುಗಳನ್ನು ರೆಕಾರ್ಡ್ ಮಾಡಲಾಗಿದೆಯೇ? ಎಂಬ ಆಯಾಮದಲ್ಲಿ ಸೈಬರ್ ಹಾಗೂ ಫೋರೆನ್ಸಿಕ್ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.
ಆರೋಪಿಯು ಮಹಿಳೆಯರನ್ನು ಟಾರ್ಗೆಟ್ ಮಾಡಲು ಯಾವ ರೀತಿಯ ತಂತ್ರಗಳನ್ನು ಹೆಣೆಯುತ್ತಿದ್ದ ಎಂಬ ಬಗ್ಗೆಯೂ ತನಿಖಾ ತಂಡ ಸಾಕ್ಷ್ಯಗಳನ್ನು ಕಲೆಹಾಕುತ್ತಿದೆ.
ಮಾಟ-ಮಂತ್ರದ ಹೆಸರಿನಲ್ಲಿ ಬಲೆ :
ತನಿಖಾಧಿಕಾರಿಗಳ ಪ್ರಕಾರ, ಕೌಟುಂಬಿಕ ಸಮಸ್ಯೆ ಅಥವಾ ಅನಾರೋಗ್ಯ ಪರಿಹರಿಸುವ ನೆಪದಲ್ಲಿ ಮಾಟ-ಮಂತ್ರ ಹಾಗೂ ಅಘೋರಿ ವಿದ್ಯೆಯ ಸುಳ್ಳು ಭರವಸೆಗಳನ್ನು ನೀಡಿ ಆರೋಪಿ ಮಹಿಳೆಯರ ವಿಶ್ವಾಸ ಗಳಿಸುತ್ತಿದ್ದ. ನಂತರ ಅವರನ್ನು ಏಕಾಂತಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ.
ಈ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಹೇಳಿಕೆಗಳನ್ನು ಪೊಲೀಸರು ಪ್ರತ್ಯೇಕವಾಗಿ ದಾಖಲಿಸಿಕೊಳ್ಳುತ್ತಿದ್ದು, ಡಿಜಿಟಲ್ ಪುರಾವೆಗಳೊಂದಿಗೆ ಹೊಂದಾಣಿಕೆ ಮಾಡುತ್ತಿದ್ದಾರೆ.
ಕಠಿಣ ಕಾನೂನಿನಡಿ 5 ಪ್ರತ್ಯೇಕ ಪ್ರಕರಣಗಳು ದಾಖಲು:
ಮಹಾರಾಷ್ಟ್ರದ ನರಬಲಿ, ಅಮಾನವೀಯ ಪದ್ಧತಿಗಳು ಮತ್ತು ಮಾಟ-ಮಂತ್ರ ನಿಷೇಧ ಕಾಯ್ದೆಯ (Maharashtra Prevention of Human Sacrifice and Other Inhuman, Evil and Aghori Practices and Black Magic Act) ಅಡಿಯಲ್ಲಿ ಅಶೋಕ್ ಖರಾತ್ ವಿರುದ್ಧ ಈಗಾಗಲೇ ಐದು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಈ ಜಾಲದಲ್ಲಿ ಇನ್ನೂ ಎಷ್ಟು ಮಹಿಳೆಯರು ಸಂತ್ರಸ್ತರಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಆಳವಾದ ವಿಚಾರಣೆ ಮುಂದುವರಿದಿದೆ.
ರಾಜಕೀಯ ಸಂಚಲನ ಮತ್ತು ರಾಜೀನಾಮೆ :
ಈ ಗಂಭೀರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಹಾರಾಷ್ಟ್ರದ ರಾಜಕೀಯ ಮತ್ತು ಆಡಳಿತ ವಲಯದಲ್ಲೂ ಭಾರಿ ಬಿರುಗಾಳಿ ಎದ್ದಿದೆ. ಈ ಪ್ರಕರಣದ ಬೆಳವಣಿಗೆಗಳ ಬೆನ್ನಲ್ಲೇ ರೂಪಾಲಿ ಚಕಣ್‌ಕರ್ ಅವರ ರಾಜೀನಾಮೆ ಪ್ರಸಂಗವೂ ರಾಜಕೀಯ ತಿರುವು ಪಡೆದುಕೊಂಡಿದೆ.
ಮೂಢನಂಬಿಕೆಯನ್ನು ಬಂಡವಾಳವಾಗಿಸಿಕೊಂಡು ಮಹಿಳೆಯರನ್ನು ಶೋಷಿಸುವುದು ಹಾಗೂ ಖಾಸಗಿ ವಿಡಿಯೋಗಳನ್ನು ದುರುಪಯೋಗಪಡಿಸಿಕೊಂಡು ಬಾಯಿ ಮುಚ್ಚಿಸುವಂತಹ ಕೃತ್ಯಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬ ಕೂಗು ಬಲಗೊಂಡಿದೆ.

