HomeKarnatakaಗೃಹಲಕ್ಷ್ಮಿ ಯೋಜನೆಯಲ್ಲಿ 225 ಕೋಟಿ ಲೂಟಿ ನಡೆದಿದ್ದು ರಾಜಕಾರಣಿಗಳ ಗ್ಯಾಂಗ್ ಇದೆ ಎಂದ ಅಶೋಕ್

ಗೃಹಲಕ್ಷ್ಮಿ ಯೋಜನೆಯಲ್ಲಿ 225 ಕೋಟಿ ಲೂಟಿ ನಡೆದಿದ್ದು ರಾಜಕಾರಣಿಗಳ ಗ್ಯಾಂಗ್ ಇದೆ ಎಂದ ಅಶೋಕ್

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ 225 ಕೋಟಿ ರೂ. ಸರ್ಕಾರಿ ಪ್ರಾಯೋಜಿತ ಲೂಟಿ ನಡೆದಿದ್ದು, ಇದರ ಹಿಂದೆ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಗ್ಯಾಂಗ್‌ ಇದೆ. ಈ ಅಕ್ರಮದ ವಿರುದ್ಧ ತನಿಖೆ ಮಾಡಲು ಕೂಡಲೇ ಎಸ್‌ಐಟಿ ರಚಿಸಬೇಕೆಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 225 ಕೋಟಿ ರೂ. ಅಕ್ರಮ ಆಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ನಕಲಿ ಖಾತೆಗಳಿಗೆ ಹಣ ಸಂದಾಯವಾಗಿದ್ದು, ಅಧಿಕಾರಿ ಹಾಗೂ ರಾಜಕಾರಣಿಗಳ ದೊಡ್ಡ ಗ್ಯಾಂಗ್‌ ಇದರ ಹಿಂದಿದೆ. ಸತ್ತವರ ಹೆಸರಿಗೆ ಹಣ ಹೋಗಿದೆ ಎಂದರೆ ಕಂದಾಯ ಇಲಾಖೆ ಕತ್ತೆ ಕಾಯುತ್ತಿದೆಯೇ ಎಂದು ಪ್ರಶ್ನೆ ಮಾಡಿದರು.

ಕರ್ನಾಟಕ ಐಟಿ ರಾಜ್ಯ ಎಂದು ಹೆಸರಾಗಿದ್ದರೂ ರಾಜ್ಯ ಸರ್ಕಾರಕ್ಕೆ ಸತ್ತವರ ಹೆಸರಿಗೆ ಹಣ ಹೋಗುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಬೇಕೆಂದೇ ಸಾಫ್ಟ್‌ವೇರ್‌ ತಯಾರಿ ಮಾಡಿ ಸತ್ತವರ ಹೆಸರಲ್ಲಿ ಹಣ ಲೂಟಿ ಮಾಡಲಾಗಿದೆ. ಇದು ಅತಿ ದೊಡ್ಡ ಸೈಬರ್‌ ಕ್ರೈಂ ಆಗಿದ್ದು, ಇದರ ತನಿಖೆಗೆ ಎಸ್‌ಐಟಿ ರಚಿಸಬೇಕಿದೆ. 2.11 ಲಕ್ಷ ಫಲಾನುಭವಿಗಳು ಸತ್ತಿದ್ದಾರೆ ಎಂದು ಗೊತ್ತಾಗಿದೆ. ಇನ್ನೂ 77,000 ಜನರ ದತ್ತಾಂಶ ಇನ್ನೂ ಪತ್ತೆಯಾಗಿಲ್ಲ. ಈಗಾಗಲೇ 5,000 ಕೋಟಿ ರೂ. ನುಂಗಿದ್ದು, ಈಗ ಮತ್ತೆ ಹಗರಣ ನಡೆದಿದೆ. ಕಾಂಗ್ರೆಸ್‌ನ ನಿರಾಶ್ರಿತರಿಗೆ ಪದವಿ ಕೊಡಲು ಗ್ಯಾರಂಟಿ ಸಮಿತಿ ರಚಿಸಿ ಅದಕ್ಕೆ 150 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಈ ಸಮಿತಿ ಅಕ್ರಮ ತಡೆದಿಲ್ಲ. ಇವರೇ ಅಕ್ರಮಗಳ ಸರದಾರರು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್‌ ಸರ್ಕಾರದಲ್ಲಿ ಆರ್ಥಿಕ ಇಲಾಖೆ ಬಿಕ್ಕಟ್ಟಿನ ಇಲಾಖೆಯಾಗಿದೆ. ಎಲ್ಲಿಂದಲೂ ಸರ್ಕಾರಕ್ಕೆ ಆದಾಯ ಬರುತ್ತಿಲ್ಲವಾದ್ದರಿಂದ ಮೂರು ತಿಂಗಳಿಂದ 16 ಲಕ್ಷ ಫಲಾನುಭವಿಗಳ ಪಿಂಚಣಿಗಳನ್ನು ಸ್ಥಗಿತಗೊಳಿಸಲಾಗಿದೆ. ಇವರಲ್ಲಿ ಅನೇಕರಿಗೆ ಸರ್ಕಾರಿ ಕಚೇರಿಗೂ ಅಲೆದಾಡಲು ಸಾಧ್ಯವಿಲ್ಲ. ಸರಿಯಾಗಿ ಸಮೀಕ್ಷೆ ಮಾಡಿ, ನೋಟಿಸ್‌ ನೀಡಿ ರದ್ದು ಮಾಡಿದ್ದರೆ ಅದನ್ನು ಒಪ್ಪಬಹುದಿತ್ತು. ಆದರೆ ಸರ್ಕಾರ ಗ್ಯಾರಂಟಿ ಮೊದಲು, ಪಿಂಚಣಿ ಆಮೇಲೆ ಎಂಬ ನೀತಿಯನ್ನು ತಂದಿದೆ ಎಂದು ದೂರಿದರು.

ಕದ್ದು ಮುಚ್ಚಿ ನೀರು ಬಿಟ್ಟಿದ್ದಾರೆ

ಕೆಆರ್‌ಎಸ್‌ ಜಲಾಶಯದಲ್ಲಿ 124.80 ಅಡಿ ಸಾಮರ್ಥ್ಯವಿದ್ದು, ಈಗ 81.03 ಅಡಿಯಷ್ಟು ನೀರಿದೆ. ಒಳಹರಿವು 689 ಕ್ಯೂಸೆಕ್ಸ್‌ ಇದ್ದು, ಹೊರಹರಿವು 1886 ಕ್ಯೂಸೆಕ್ಸ್‌ ಆಗಿದೆ. ಅಂದರೆ ಅತಿ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಬೆಳೆಗಳಿಗೆ, ನಾಲೆಗಳಿಗೆ ನೀರು ನೀಡುವುದಿಲ್ಲವೆಂದು ಈಗಾಗಲೇ ಪ್ರಕಟಿಸಲಾಗಿದೆ. ಅರ್ಧ ಬೆಳೆ ಬೆಳೆದು ನೀರಿಲ್ಲದೆ ರೈತರು ಸಂಕಷ್ಟದಲ್ಲಿ ಪ್ರತಿಭಟಿಸುತ್ತಿದ್ದಾರೆ. ಯಾರಿಗೂ ನೀರು ನೀಡದೆಯೇ 1886 ಕ್ಯೂಸೆಕ್ಸ್‌ ನೀರು ಎಲ್ಲಿಗೆ ಹೋಗುತ್ತಿದೆ? ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಡಲಾಗಿದೆ. ಜೂನ್‌ ತಿಂಗಳಲ್ಲಿ 9.19 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕಿದೆ ಎಂದರು.

ತಮಿಳುನಾಡಲ್ಲಿ ಮಿತ್ರ ಪಕ್ಷವನ್ನು ತೃಪ್ತಿ ಪಡಿಸಲು ಕಾಂಗ್ರೆಸ್‌ ಸರ್ಕಾರ ನೀರು ನೀಡುತ್ತಿದೆ. ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದಕ್ಕೆ ಇದೇ ಕಾರಣ. ಈ ಬಗ್ಗೆ ಮುಂಚೆಯೇ ರೈತರ ಸಭೆ ಕರೆದು ಚರ್ಚಿಸಬೇಕಿತ್ತು. ಮಂಡ್ಯ, ಮೈಸೂರು, ಬೆಂಗಳೂರು ನಗರ ಮೊದಲಾದ ಭಾಗಗಳ ರೈತರು ಈ ನೀರನ್ನು ನಂಬಿದ್ದಾರೆ. ಇಷ್ಟು ಕಡಿಮೆ ನೀರಿರುವಾಗ ಸರ್ವಪಕ್ಷಗಳ ಸಭೆ ಕರೆದು ಮಾತಾಡಬೇಕಿತ್ತು. ರಾಜಕೀಯವೇ ಗೊತ್ತಿಲ್ಲದ ತಮಿಳುನಾಡು ಸಿಎಂ ಈಗಾಗಲೇ ಮೇಕೆದಾಟು ಯೋಜನೆ ಜಾರಿಯಾಗಲು ಬಿಡಲ್ಲ ಎಂಬ ನಿರ್ಣಯ ಕೈಗೊಂಡಿದ್ದಾರೆ. ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೇವಾಲಯಕ್ಕೆ ಹೋಗಿ ನಾಮ ಹಾಕಿಕೊಳ್ಳುವುದು ಬಿಟ್ಟರೆ ಏನೂ ಮಾಡುತ್ತಿಲ್ಲ. ನಮ್ಮ ಮುಖ್ಯಮಂತ್ರಿಗೆ ಅಂತಹ ಧೈರ್ಯ ಏಕಿಲ್ಲ? ಅವರ ವಿರುದ್ಧ ಖಂಡನಾ ನಿರ್ಣಯ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಬಿಡದಿ ಹೋರಾಟ

ಬಿಡದಿ ಟೌನ್‌ಶಿಪ್‌ ಯೋಜನೆ ಕೈ ಬಿಟ್ಟು ರೈತರ ಜಮೀನು ಉಳಿಸಬೇಕು. ಅದನ್ನು ಬಿಟ್ಟು ಯಾವ ರಾಜಕಾರಣಿಯ ಜಮೀನು ಇದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಬೆಂಬಲಿಗರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟು ನಿವೇಶನ ಖಾಲಿ ಎಂದು ದಾಖಲೆ ಬಿಡುಗಡೆ ಮಾಡಲಿ. ಅದನ್ನು ಮರೆಮಾಚಿ ಬಿಡದಿ ಟೌನ್‌ಶಿಪ್‌ ಯೋಜನೆ ಎಚ್‌.ಡಿ.ಕುಮಾರಸ್ವಾಮಿ ಮಾಡಿದ್ದು ಎಂದು ಆರೋಪ ಮಾಡುತ್ತಿದ್ದಾರೆ. ನಾನು ಮೂರು ಬಾರಿ ಬಿಡದಿಗೆ ಭೇಟಿ ನೀಡಿದ್ದು, ದೊಡ್ಡ ಮಟ್ಟದ ಹೋರಾಟ ಆರಂಭಿಸಲಿದ್ದೇವೆ. ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇನ್ನು ಒಂದೂವರೆ ವರ್ಷದಲ್ಲಿ ಏನೂ ಮಾಡಲು ಆಗಲ್ಲ. ಮುಂದೆ ನಮ್ಮ ಸರ್ಕಾರ ಬಂದರೆ ಯೋಜನೆ ರದ್ದುಪಡಿಸುತ್ತೇವೆ. ಆನೇಕಲ್‌ನಲ್ಲಿ 9,000 ಎಕರೆ ಸ್ವಾಧೀನ ಮಾಡಲು ಮುಂದಾಗಿದ್ದಾರೆ. ದೇವನಹಳ್ಳಿ ಬಳಿ ಸ್ವಾಧೀನ ಮಾಡಲು ಮುಂದಾಗಿದ್ದರೂ ಅಲ್ಲಿ ರೈತರು ಅವಕಾಶ ನೀಡಿಲ್ಲ. ಒಂದು ಕಡೆ ಮರ ಕಡಿ, ಮತ್ತೊಂದು ಕಡೆ ನೆಡಿ ಎನ್ನುವ ಕಾಂಗ್ರೆಸ್‌ನಿಂದ ಪರಿಸರ ಹಾಳಾಗುತ್ತಿದೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular