ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಕಥೆಗಳ ಮೂಲಕ ಗುರುತಿಸಿಕೊಂಡಿರುವ ನಟ ಶ್ರೀ ವಿಷ್ಣು ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. 2027ರ ಸಂಕ್ರಾಂತಿ ಹಬ್ಬಕ್ಕೆ ತೆರೆಕಾಣಲಿರುವ ‘ಕಾಮ್ರೇಡ್ ಕಲ್ಯಾಣ್’ ಚಿತ್ರದ ಜೊತೆಗೆ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯ ನಿರ್ಮಾಣದ ಮುಂಬರುವ ಸಿನಿಮಾದಲ್ಲೂ ಅವರು ಅಭಿನಯಿಸುತ್ತಿದ್ದಾರೆ. ‘ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಪ್ರೊಡಕ್ಷನ್ ನಂ. 39’ ಶೀರ್ಷಿಕೆಯಡಿ ನಿರ್ಮಾಣವಾಗುತ್ತಿರುವ ಈ ಹೊಸ ಚಿತ್ರಕ್ಕೆ ನಾಯಕಿಯಾಗಿ ಕನ್ನಡದ ಖ್ಯಾತ ನಟಿ ಆಶಿಕಾ ರಂಗನಾಥ್ ಆಯ್ಕೆಯಾಗಿದ್ದಾರೆ.
‘ಅನಗನಗ’ ಚಿತ್ರದ ಮೂಲಕ ಹೆಸರು ಮಾಡಿದ್ದ ಯುವ ನಿರ್ದೇಶಕ ಸನ್ನಿ ಸಂಜಯ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಈಗಾಗಲೇ ಚಿತ್ರೀಕರಣ ಭರದಿಂದ ಸಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಗ್ಲಿಂಪ್ಸ್ ವೀಡಿಯೋ ಇಂದಿನ ಯುವಜನತೆಯ ಜೀವನದ ಹೋರಾಟಗಳು ಮತ್ತು ಭಾವನೆಗಳನ್ನು ನೈಜವಾಗಿ ಬಿಂಬಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಟಾಲಿವುಡ್‌ನಲ್ಲಿ ಆಶಿಕಾ ರಂಗನಾಥ್ ಕ್ರೇಜ್
‘ಸರ್ದಾರ್ 2’ ಚಿತ್ರದ ಯಶಸ್ಸಿನ ನಂತರ ತೆಲುಗು ಚಿತ್ರರಂಗದಲ್ಲಿ ಭಾರಿ ಬೇಡಿಕೆ ಗಿಟ್ಟಿಸಿಕೊಂಡಿರುವ ಆಶಿಕಾ ರಂಗನಾಥ್, ಈ ಹೊಸ ಸಿನಿಮಾದಲ್ಲಿ ಶ್ರೀ ವಿಷ್ಣು ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡದಿಂದ ಇನ್ನು ಅಧಿಕೃತ ಪ್ರಕಟಣೆ ಹೊರಬೀಳಬೇಕಿದ್ದರೂ, ಆಶಿಕಾ ಅವರ ಸೇರ್ಪಡೆ ಖಚಿತವಾಗಿದೆ ಎಂದು ಗಾಂಧಿನಗರದ ಮೂಲಗಳು ತಿಳಿಸಿವೆ.
ಈ ಚಿತ್ರವನ್ನು ನಾಗ ವಂಶಿ ಪ್ರಸ್ತುತಪಡಿಸುತ್ತಿದ್ದು, ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ಹಾರಿಕಾ ಸೂರ್ಯದೇವರ ನಿರ್ಮಿಸುತ್ತಿದ್ದಾರೆ. ಚಿತ್ರದ ಇತರ ತಾರಾಗಣ ಮತ್ತು ತಾಂತ್ರಿಕ ವರ್ಗದ ಕುರಿತು ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

