ರಾಮಾನಂದ್ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರದಲ್ಲಿ ಅಭಿನಯಿಸಿ ದೇಶದಾದ್ಯಂತ ಅಪಾರ ಪ್ರೀತಿ ಗಳಿಸಿದ್ದ ಹಿರಿಯ ನಟ ಅರುಣ್ ಗೋವಿಲ್, ಇದೀಗ ನಿತೇಶ್ ತಿವಾರಿ ನಿರ್ದೇಶನದ ಬಿಗ್ ಬಜೆಟ್ ‘ರಾಮಾಯಣ’ ಸಿನಿಮಾದ ಮೂಲಕ ಮತ್ತೆ ಕಾವ್ಯ ಲೋಕಕ್ಕೆ ಮರಳಿದ್ದಾರೆ. ವಿಶೇಷವೆಂದರೆ, ಈ ಹಿಂದೆ ರಾಮನಾಗಿ ಮೆರೆದಿದ್ದ ಅವರು ಈ ಹೊಸ ಚಿತ್ರದಲ್ಲಿ ಶ್ರೀರಾಮನ ತಂದೆ, ಅಯೋಧ್ಯೆಯ ರಾಜ ದಶರಥನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ರಣಬೀರ್ ಕಪೂರ್ ಶ್ರೀರಾಮನಾಗಿ ಅಭಿನಯಿಸುತ್ತಿರುವ ಈ ಚಿತ್ರದ ಅರುಣ್ ಗೋವಿಲ್ ಅವರ ಹೊಸ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.
“ಒಂದು ಪೀಳಿಗೆಗೆ ಶ್ರೀರಾಮನನ್ನು ಕಣ್ಣಮುಂದೆ ತಂದುಕೊಟ್ಟಿದ್ದ ನಟ, ಇದೀಗ ಅಯೋಧ್ಯೆಯ ರಾಜ ದಶರಥನಾಗಿ ಮತ್ತೆ ರಾಮಾಯಣ ಲೋಕಕ್ಕೆ ಮರಳುತ್ತಿದ್ದಾರೆ” ಎಂದು ಚಿತ್ರತಂಡ ಪೋಸ್ಟರ್ ಜೊತೆ ಬರೆದುಕೊಂಡಿದೆ. ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ಇಂಟರ್ನೆಟ್‌ನಲ್ಲಿ ಅಭಿಮಾನಿಗಳು ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಿಂಹಾಸನದ ಮೇಲಿರುವ ಮೀನಿನ ಗುರುತು ಅಯೋಧ್ಯೆ ಹಾಗೂ ಉತ್ತರ ಪ್ರದೇಶದ ರಾಜಮುದ್ರೆಯನ್ನು ಸಂಕೇತಿಸುತ್ತದೆ ಎಂದು ಅಭಿಮಾನಿಯೊಬ್ಬರು ವಿಶ್ಲೇಷಿಸಿದ್ದಾರೆ. ಬಾಲ್ಯದಿಂದಲೂ ಅರುಣ್ ಗೋವಿಲ್ ಅವರನ್ನು ರಾಮನಾಗಿ ನೋಡಿ ಆರಾಧಿಸಿದ್ದ ನಮಗೆ, ಈಗ ಅವರನ್ನು ದಶರಥನಾಗಿ ನೋಡುವುದು ಅತ್ಯಂತ ಕುತೂಹಲಕಾರಿಯಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಈ ರಾಮಾಯಣ ಮಹಾಕಾವ್ಯವು ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಮೊದಲ ಭಾಗವು 2026ರ ನವೆಂಬರ್‌ನಲ್ಲಿ ವಿಶ್ವದಾದ್ಯಂತ ತೆರೆಕಾಣಲಿದೆ. ಎರಡನೇ ಭಾಗವು 2027ರ ದೀಪಾವಳಿ ಹಬ್ಬದ ಶುಭಸಮಯದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಕೆಜಿಎಫ್ ಖ್ಯಾತಿಯ ಯಶ್, ಲಕ್ಷ್ಮಣನಾಗಿ ರವಿ ದುಬೆ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ.
ಕೇವಲ ಭಾರತೀಯ ಭಾಷೆಗಳಾದ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಮಾತ್ರವಲ್ಲದೆ ಇಂಗ್ಲಿಷ್, ಸ್ಪ್ಯಾನಿಷ್ ಹಾಗೂ ಜಪಾನೀಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲೂ ಈ ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತರಲು ನಿರ್ಮಾಪಕ ನಮಿತ್ ಮಲ್ಹೋತ್ರಾ ಯೋಜನೆ ರೂಪಿಸಿದ್ದಾರೆ.

