HomeJobsಇಂಜಿನಿಯರ್, ಸೇಲ್ಸ್‌ ಟೀಮ್‌ಗಿಂತ ಮೊದಲು ಇವರ ಕೆಲಸಕ್ಕೆ ಕುತ್ತು ತರಲಿದೆ AI

ಇಂಜಿನಿಯರ್, ಸೇಲ್ಸ್‌ ಟೀಮ್‌ಗಿಂತ ಮೊದಲು ಇವರ ಕೆಲಸಕ್ಕೆ ಕುತ್ತು ತರಲಿದೆ AI

ಕೃತಕ ಬುದ್ಧಿಮತ್ತೆ (ಎಐ) ವಿವಿಧ ಕ್ಷೇತ್ರದಲ್ಲಿನ ಉದ್ಯೋಗವನ್ನು ಕಡಿತ ಮಾಡುತ್ತದೆ ಎಂಬುದು ಕೇವಲ ಹೇಳಿಕೆಯಾಗಿ ಉಳಿದಿಲ್ಲ. ಇದನ್ನು ಈಗ ಎಲ್ಲಾ ವಲಯಗಳಲ್ಲೂ ಕಾಣುತ್ತಿದ್ದೇವೆ. ಹಲವಾರು ಕ್ಷೇತ್ರದಲ್ಲಿ ಈಗಾಗಲೇ ಎಐ ಕಾರಣಕ್ಕೆ ಜನರು ಕೆಲಸ ಕಳೆದುಕೊಂಡಿದ್ದಾರೆ.

ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಯೊಂದು ಆರಂಭವಾಗಿದೆ. ಇಂಜಿನಿಯರ್‌ಗಳು, ಸೇಲ್ಸ್‌ ತಂಡಕ್ಕೂ ಮೊದಲು ಎಐ ಸಂಶೋಧಕರ ಉದ್ಯೋಗವನ್ನು ಕಡಿತ ಮಾಡಲಿದೆ. ಸಂಶೋಧಕರು ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ.

ಓಪನ್ ಎಐ ಉದ್ಯೋಗಿಯೊಬ್ಬರು ಈ ಕುರಿತು ನೀಡಿರುವ ಹೇಳಿಕೆ ಈಗ ಸಂಚಲನಕ್ಕೆ ಕಾರಣವಾಗಿದೆ. ಹೈಪರ್ಬೋಲಿಕ್ ಲ್ಯಾಬ್ಸ್ ಸಹ-ಸಂಸ್ಥಾಪಕ ಮತ್ತು ಸಿಟಿಒ ಯುಚೆನ್ ಜಿನ್ ಪ್ರಕಾರ, ಓಪನ್ಎಐ ಸಂಶೋಧಕರೊಬ್ಬರು ಖಾಸಗಿಯಾಗಿ ಅವರಿಗೆ ಮೂಲಸೌಕರ್ಯ ಎಂಜಿನಿಯರ್‌ಗಿಂತ ಮೊದಲು ಮತ್ತು ಮಾರಾಟ ತಂಡಗಳಿಗಿಂತ ಮುಂಚೆಯೇ ಸಂಶೋಧಕರನ್ನು ಎಐ ಬದಲಾಯಿಸಲಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲು ಸಂಶೋಧಕರ ಕೆಲಸ ಹೋಗಲಿದೆ. ಬಳಿಕ ಮೂಲಸೌಕರ್ಯ ವಲಯದ ಇಂಜಿನಿಯರ್‌ಗಳು ಮತ್ತು ಮಾರಾಟ ಪ್ರತಿನಿಧಿಗಳು ಕೆಲಸ ಕಳೆದುಕೊಳ್ಳುತ್ತಾರೆ. ಆದರೆ ಈ ಹೇಳಿಕೆ ನೀಡಿದವರು ಯಾರು? ಎಂಬುದುನ್ನು ಬಹಿರಂಗ ಮಾಡಿಲ್ಲ. ಆದರೆ ಈ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ.

ಸಂಶೋಧನಾ ಕಾರ್ಯದ ಹೆಚ್ಚಿನ ಭಾಗದಲ್ಲಿ ಎಐ ವ್ಯವಸ್ಥೆಗಳು ಈಗಾಗಲೇ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚಿನ ಸಂಶೋಧನೆಗಳ ಮಾದರಿಗಳನ್ನು ತಿಳಿದು ಅವುಗಳನ್ನು ಅನುಸರಿಸುವ ಮೂಲಕ ಈಗಾಗಲೇ ಕೆಲಸ ಮಾಡಲಾಗುತ್ತಿದೆ ಮತ್ತು ಅದರ ಪರೀಕ್ಷೆಗಳು ಸಹ ಯಶಸ್ವಿಯಾಗಿವೆ.

ಎಐ ಮನುಷ್ಯರಿಗೆ ಸಾಧ್ಯವಾಗದ ವೇಗದಲ್ಲಿ ಫಲಿತಾಂಶಗಳನ್ನು ವಿಶ್ಲೇಷಿಸುತ್ತದೆ, ಪರೀಕ್ಷೆ ಮಾಡುತ್ತದೆ. ಆದ್ದರಿಂದ ಉನ್ನತ ಮಟ್ಟದ ಸಂಶೋಧಕರನ್ನು ಹೊರತುಪಡಿಸಿ ಉಳಿದವರು ಎಐ ಕಾರಣಕ್ಕೆ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಎಲ್ಲಾ ಎಐ ಪ್ರಯೋಗಾಲಯಗಳಿಗೆ ಈ ಮಾದರಿ ತರಬೇತಿ ನೀಡಲಾಗುತ್ತಿದೆ. ಎಷ್ಟು ವೇಗವಾಗಿ ಫಲಿತಾಂಶ ಬರುತ್ತದೆ, ಅಂತಿಮ ವರದಿಯ ಮಾದರಿಗಳನ್ನು ಸಹ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಈ ಹೇಳಿಕೆಯನ್ನು ನೀಡಿರುವ ಓಪನ್ ಎಐ ಉದ್ಯೋಗಿ ಎಐ ಅನ್ನು ‘ಅಂತಿಮ ಬಾಸ್’ ಎಂದು ಕರೆದಿದ್ದಾರೆ. ಇದು ಮನುಷ್ಯರು, ಯಂತ್ರಗಳನ್ನು ಸ್ಪಷ್ಟವಾಗಿ ವಿಭಾಗ ಮಾಡುವ ಪ್ರಮುಖ ಪಾತ್ರವಾಗಿ ಕೆಲಸ ಮಾಡುತ್ತದೆ.

ಹಲವು ಟೆಕ್ಕಿಗಳು ಮೂಲಸೌಕರ್ಯ ವಲಯದಲ್ಲಿ ಕೆಲಸ ಮಾಡುವವರು ಎಐನಿಂದ ಮೊದಲು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಹೇಳುತ್ತಲೇ ಬಂದಿದ್ದರು. ಆದರೆ ಈಗ ವಿವರಣೆಯನ್ನು ಅವರು ಒಪ್ಪಿಕೊಳ್ಳುತ್ತಿದ್ದು, ಸಂಶೋಧಕರ ಕೆಲಸ ಬಿಕ್ಕಟ್ಟಿನಲ್ಲಿದೆ.

ಈ ಬದಲಾವಣೆ ತಕ್ಷಣಕ್ಕೆ ಆಗುತ್ತದೆಯೇ? ಎಂಬುದಕ್ಕೆ ಯಾವುದೇ ಕಾಲಮಿತಿಯು ಚರ್ಚೆಯ ಸಂದರ್ಭದಲ್ಲಿ ಕಂಡುಬಂದಿಲ್ಲ. ಆದರೆ ಓಪನ್ಎಐ ಸ್ವತಃ ಅಗ್ರಸ್ಥಾನದಲ್ಲಿ ನಿಂತು ಇಂತಹ ದಿನಗಳನ್ನು ಎದುರಿಸುವ ಸಮಯ ದೂರವಿಲ್ಲ ಎಂದು ಹೇಳಿದೆ.

ಈ ಬಗ್ಗೆ ಹಿಂದಿನ ವರ್ಷದ ಕಡೆ ಗಮನವನ್ನು ಹರಿಸಿದರೆ 2025ರ ಬೇಸಿಗೆಯಲ್ಲಿ ಮೆಟಾದ ಅರ್ಧ ಡಜನ್‌ಗೂ ಹೆಚ್ಚು ಸಂಶೋಧಕರು ಕೆಲಸ ಕಳೆದುಕೊಂಡರು. ಸಂಶೋಧಕರ ಬದಲು ಎಐ ಲ್ಯಾಬ್‌ಗಳ ಮೇಲೆ ಕಂಪನಿಗಳು ಹೆಚ್ಚಿನ ಹೂಡಿಕೆಯನ್ನು ಮಾಡುತ್ತಿವೆ.

ಜುಲೈನಲ್ಲಿ ಮೆಟಾಕ್ಕೆ ಸೇರಿದ ಇಬ್ಬರು ಸಂಶೋಧನಾ ವಿಜ್ಞಾನಿಗಳಾದ ಜೇಸನ್ ವೀ ಮತ್ತು ಝಿಕಿಂಗ್ ಸನ್ ಕೆಲಸ ಕಳೆದುಕೊಂಡರು. ಇನ್ನೊಬ್ಬ ಸಂಶೋಧಕ ಹ್ಯೂಂಗ್ ವಾನ್ ಚುಂಗ್ ಸಹ ಹೊರ ಹೋದರು. ಈ ವಲಯದಲ್ಲಿ ಬಹುಶಃ ಅತ್ಯಂತ ಉನ್ನತ ಮಟ್ಟದ ನಿರ್ಗಮನವೆಂದರೆ ಚಾರ್ಟ್‌ ಜಿಪಿಟಿ ಮತ್ತು ಜಿಪಿಟಿ-4ರ ಸಹ-ಸೃಷ್ಟಿಕರ್ತ ಶೆಂಗ್ಜಿಯಾ ಝಾವೋ. ಅವರು ಮೆಟಾ ಸೂಪರಿಂಟೆಲಿಜೆನ್ಸ್ ಲ್ಯಾಬ್‌ ಮುಖ್ಯ ವಿಜ್ಞಾನಿಯಾಗಿದ್ದರು.

ದೊಡ್ಡ ಟೆಕ್ ಕಂಪನಿಗಳು ಈಗಾಗಲೇ ಈ ಸಂಶೋಧಕರನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ. ಹಲವಾರು ದೊಡ್ಡ ಕಂಪನಿಗಳು ಈಗಾಗಲೇ ಎಐನಿಂದ ಉದ್ಯೋಗ ಕಡಿತದ ಕುರಿತು ಬಹಿರಂಗವಾಗಿ ಮಾತನಾಡುತ್ತಿವೆ.

ಮೈಕ್ರೋಸಾಫ್ಟ್ ಜುಲೈ 2025ರ ವರದಿಯಲ್ಲಿ ಇತಿಹಾಸಕಾರರು, ಕೋಡರ್‌ಗಳು, ಮಾರಾಟಗಾರರು, ಪತ್ರಕರ್ತರು ಮತ್ತು ಡೇಟಾ ವಿಜ್ಞಾನಿಗಳು ಎಐನಿಂದ ಬಹುದೊಡ್ಡ ಸವಾಲು ಎದುರಿಸಲಿದ್ದಾರೆ ಎಂದು ಹೇಳಿತ್ತು. ಅದೇ ಸಮಯದಲ್ಲಿ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರು ಎಐ-ಚಾಲಿತ ದಕ್ಷತೆಯು ಕಂಪನಿಯ ಕಾರ್ಪೊರೇಟ್ ಕಾರ್ಯಪಡೆಯನ್ನು ಮುಂದಿನ ಕೆಲವು ವರ್ಷಗಳಲ್ಲಿ ಕಡಿಮೆ ಮಾಡುತ್ತದೆ ಎಂದು ಹೇಳಿದ್ದರು.

ಹೆಚ್ಚಿನ ಕಂಪನಿಗಳಲ್ಲಿ ಈಗಾಗಲೇ ಎಐ ಕಾರಣಕ್ಕೆ ಮಾನವ ಸಂಪನ್ಮೂಲ ವಿಭಾಗದ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲಾಗಿದೆ. ಐಬಿಎಂ ಎಐ ಮೂಲಕ ಕೇವಲ ಉದ್ಯೋಗಗಳನ್ನು ಕಡಿತಗೊಳಿಸುವುದರಿಂದ ಇತರ ಕ್ಷೇತ್ರಗಳಿಗೆ ಹಣವನ್ನು ಉಪಯೋಗಿಸಬಹುದು ಎಂದು ಹೇಳಿತ್ತು.

2025ರ ಪಾಡ್‌ಕ್ಯಾಸ್ಟ್‌ ಒಂದರಲ್ಲಿ ಸಂದರ್ಶನದಲ್ಲಿ ಸೇಲ್ಸ್ಫೋರ್ಸ್ ಸಿಇಒ ಮಾರ್ಕ್ ಬೆನಿಯೋಫ್, ಹೆಚ್ಚಿನ ಪ್ರಮಾಣದ ಕೆಲಸ ನಿರ್ವಹಿಸಲು ಎಐ ವ್ಯವಸ್ಥೆಗಳನ್ನು ಜಾರಿಗೆ ತಂದ ನಂತರ ಕಂಪನಿಯು ತನ್ನ ಕಾಲ್ ಸೆಂಟರ್ ಉದ್ಯೋಗಿಗಳ ಸಂಖ್ಯೆಯನ್ನು 9,000 ದಿಂದ ಸುಮಾರು 5,000ಕ್ಕೆ ಇಳಿಸಿದೆ ಎಂದು ಹೇಳಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular