ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಹಾಗೂ ಗ್ಲಾಮರಸ್ ತಾರೆ ಆಶಿಕಾ ರಂಗನಾಥ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತುಮಕೂರು ಮೂಲದವರಾದ ಆಶಿಕಾ, ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಸ್ಪರ್ಧೆಯ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ, ‘ಕ್ರೇಜಿ ಬಾಯ್’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಪರಿಚಯಗೊಂಡರು. ತಮ್ಮ ಸೌಂದರ್ಯ ಹಾಗೂ ನಟನಾ ಕೌಶಲ್ಯದಿಂದ ಪ್ರೇಕ್ಷಕರ ಮನಗೆದ್ದಿರುವ ಅವರು, ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಸ್ಯಾಂಡಲ್ವುಡ್ನ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.
‘ಮಾಸ್ ಲೀಡರ್’, ‘ಮುಗುಳು ನಗೆ’, ‘ರ್ಯಾಂಬೋ ೨’ ಮತ್ತು ‘ಮದಗಜ’ ನಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಆಶಿಕಾ, ತಮ್ಮ ಅಭಿನಯಕ್ಕಾಗಿ ‘ಸೈಮಾ’ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ‘ರ್ಯಾಂಬೋ ೨’ ಚಿತ್ರದ ‘ಚುಟು ಚುಟು’ ಹಾಗೂ ‘ಕೋಟಿಗೊಬ್ಬ ೩’ ಚಿತ್ರದ ‘ಪಟಾಕಿ ಪೋರಿಯೋ’ ಹಾಡುಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಅವರು, ಇತ್ತೀಚೆಗೆ ಬಿಡುಗಡೆಯಾದ ‘O2’ ಸಿನಿಮಾದಲ್ಲಿ ತಮ್ಮ ಗಂಭೀರ ಅಭಿನಯದ ಮೂಲಕ ಪ್ರಶಂಸೆ ಪಡೆದಿದ್ದಾರೆ.
ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗದೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ಆಶಿಕಾ ತಮ್ಮ ಛಾಪು ಮೂಡಿಸುತ್ತಿದ್ದಾರೆ. ತೆಲುಗಿನಲ್ಲಿ ‘ಅಮಿಗೋಸ್’ ಹಾಗೂ ನಾಗಾರ್ಜುನ ಜೊತೆ ‘ನಾ ಸಾಮಿ ರಂಗ’ ಚಿತ್ರಗಳಲ್ಲಿ ನಟಿಸಿರುವ ಅವರು, ಪ್ರಸ್ತುತ ಚಿರಂಜೀವಿ ಅಭಿನಯದ ‘ವಿಶ್ವಂಭರ’ ಹಾಗೂ ತಮಿಳಿನ ‘ಸರ್ದಾರ್ ೨’ ನಂತಹ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭಾಶಯಗಳ ಸುರಿಮಳೆ ಗೈಯುತ್ತಿದ್ದಾರೆ.

