ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ ಸಿನಿಮಾಗಳ ಕೆಲಸಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಕುಟುಂಬಕ್ಕೆ ಸದಾ ಮೊದಲ ಆದ್ಯತೆ ನೀಡುತ್ತಾರೆ. ಯಾವುದೇ ವಿಶೇಷ ಸಂದರ್ಭವಿರಲಿ, ಅವರು ಶೂಟಿಂಗ್ ಬದಿಗಿಟ್ಟು ಫ್ಯಾಮಿಲಿ ಜೊತೆ ಸಮಯ ಕಳೆಯುವುದನ್ನು ಮರೆಯುವುದಿಲ್ಲ. ಇದೀಗ ಅವರ ಮುದ್ದಿನ ಮಗಳು ಸಿತಾರಾ ಘಟ್ಟಮನೇನಿ ಅವರ 14ನೇ ಜನ್ಮದಿನದ ಅಂಗವಾಗಿ ಮಹೇಶ್ ಬಾಬು ಹಂಚಿಕೊಂಡಿರುವ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ.
ಮಗಳು 14ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಮಹೇಶ್ ಬಾಬು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಪ್ರೀತಿಯ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಸಿತಾರಾ ಕೆನ್ನೆಗೆ ಮುತ್ತಿಡುತ್ತಿರುವ ಮುದ್ದಾದ ಫೋಟೋ ಒಂದನ್ನು ಪೋಸ್ಟ್ ಮಾಡಿರುವ ಅವರು, “ನೀನು ಎಷ್ಟೇ ದೊಡ್ಡವಳಾದರೂ, ಸದಾ ನನ್ನ ಪುಟ್ಟ ನಕ್ಷತ್ರವೇ. ಸಿತಾರಾಗೆ 14ನೇ ವರ್ಷದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಮುಂಬರುವ ವರ್ಷ ನಿನ್ನ ಪಾಲಿಗೆ ಅದ್ಭುತವಾಗಿರಲಿ. ನಿನ್ನನ್ನು ಸದಾ ಪ್ರೀತಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ತಂದೆ-ಮಗಳ ನಡುವಿನ ಅಪೂರ್ವ ಬಾಂಧವ್ಯವನ್ನು ಬಿಂಬಿಸುವ ಈ ಸುಂದರ ಫೋಟೋ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ಸೂಪರ್ ಸ್ಟಾರ್ ಪೋಸ್ಟ್ ಬೆನ್ನಲ್ಲೇ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಕಮೆಂಟ್ ಬಾಕ್ಸ್‌ನಲ್ಲಿ ಸಿತಾರಾಗೆ ಜನ್ಮದಿನದ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

